Site icon Ullalavani

ಯಕ್ಷಗಾನ ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು: ಯು.ಟಿ. ಖಾದರ್


ಉಳ್ಳಾಲ: ಯಕ್ಷಗಾನ ಅಥವಾ ಭರತನಾಟ್ಯದಂತಹ ಕಲೆಗಳನ್ನು ಕಲಿಯುವ ಮಕ್ಕಳಿಗೆ ಕಲೆಯ ಜತೆಗೆ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು, ತಾಳ್ಮೆ, ಶಿಸ್ತು ಹಾಗೂ ಸಂಯಮದ ಮಹತ್ವವೇನು ಎಂಬುದನ್ನೂ ಗುರುಗಳು ಕಲಿಸಿಕೊಡುತ್ತಾರೆ. ಹೀಗಾಗಿ ಈ ಕಲೆಗಳನ್ನು ಕಲಿತ ಮಕ್ಕಳಲ್ಲಿ ಶಿಸ್ತು, ತಾಳ್ಮೆ, ಏಕಾಗ್ರತೆ ಹಾಗೂ ಉತ್ತಮ ಜೀವನ ಮೌಲ್ಯಗಳು ಸಹಜವಾಗಿ ಬೆಳೆದು ಬರುತ್ತವೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.


ದುರ್ಗಾಪುರ, ಕಿನ್ಯದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ (ರಿ.) ಸಹಯೋಗದಲ್ಲಿ  ನಡೆದ ‘ಯಕ್ಷಾಯಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವಂತೆಯೇ, ಯಕ್ಷಗಾನವನ್ನೂ ರಾಜ್ಯ ಕಲೆಯನ್ನಾಗಿ ಮಾಡಬೇಕು ಎಂಬುದು ಸರ್ಕಾರದ ಮಹತ್ತರವಾದ ಆಶಯವಾಗಿದೆ. ಯಕ್ಷಗಾನವನ್ನು ರಾಜ್ಯ ಕಲೆಯನ್ನಾಗಿ ಘೋಷಿಸುವ ವಿಚಾರದಲ್ಲಿ ಸ್ವಲ್ಪ ವಿಳಂಬವಾಗಿದೆ. ಒಂದು ಕಲೆಗೆ ರಾಜ್ಯ ಕಲೆಯ ಮಾನ್ಯತೆ ನೀಡುವುದು ಅಷ್ಟು ಸುಲಭದ ಪ್ರಕ್ರಿಯೆಯಲ್ಲ. ಇದಕ್ಕಾಗಿ ಹಲವು ಅಂಶಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಯಕ್ಷಗಾನವನ್ನು ರಾಜ್ಯ ಕಲೆಯನ್ನಾಗಿ ಮಾಡುವ ವಿಚಾರ ಈಗ ಕೇವಲ ಆಶಯವಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರ ಪ್ರೋತ್ಸಾಹ ಹಾಗೂ ಸಹಕಾರ ಅಗತ್ಯ. ಯಕ್ಷಗಾನದಂತಹ ನಮ್ಮ ನಾಡಿನ ಅಮೂಲ್ಯ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕುಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಟಿ. ಗಣೇಶ್ ಭಟ್, ಯಕ್ಷಗಾನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೆಮ್ಮೆಯ ಕಲೆಯಾಗಿದ್ದು, ಇಂದು ದೇಶ-ವಿದೇಶಗಳಲ್ಲಿಯೂ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಇಂತಹ ಅಪೂರ್ವ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಯಕ್ಷಗಾನ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಯಕ್ಷಗಾನ ಕಲಿಕೆಗೆ ಹಲವು ವ್ಯವಸ್ಥೆಗಳಿದ್ದರೂ ಹಿಮ್ಮೇಳದ ಚೆಂಡೆ ಹಾಗೂ ಮದ್ದಳೆ ಕಲಿಯಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು. ವೇಷ ಧರಿಸುವುದರ ಜತೆಗೆ ಭಾಗವತರಾಗಲು, ಚೆಂಡೆ ಹಾಗೂ ಮದ್ದಳೆ ನುಡಿಸಲು ಆಸಕ್ತಿ ಹೊಂದಿರುವವರ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಿನ್ಯ ಯಕ್ಷಗಾನ ಸಂಘವು ಮುಂದಾಳತ್ವ ವಹಿಸಿ, ಕಿನ್ಯ ಪರಿಸರದ ಎಲ್ಲರಿಗೂ ಯಕ್ಷಗಾನ ಕಲಿಯುವ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನವನ್ನು ರಾಜ್ಯ ಕಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕಲೆಯನ್ನು ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಗೌರವಾಧ್ಯಕ್ಷ ಟಿ. ರಾಮಯ್ಯ ಕಿಲ್ಲೆ, 
ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಿರಾಜುದ್ದೀನ್ ಕಿನ್ಯ, ಪ್ರಾಂಶುಪಾಲ ಹಾಗೂ ಅಧ್ಯಕ್ಷ ಮೋಹನ್‌ದಾಸ್, ಸಂಚಾಲಕ ಕರುಣಾಕರ ಉಚ್ಚಿಲ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಗುರುರಾಜ್ ಭಟ್ ಕೈರಂಗಳ, ವಿನಯ ಕುಮಾರ್ ಶೆಟ್ಟಿ ಗುರುಪುರ, ಬಾಬು ಶಾಸ್ತ್ರ ಕಿನ್ಯ, ದುರ್ಗಾಪರಮೇಶ್ವರಿ ಕುಕ್ಕಿಲ, ಪ್ರೇಮಾ ಕಿಶೋರ್ ಪುತ್ತೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯ ಸಂಚಾಲಕರಾದ 
ಕೃಷ್ಣಪ್ಪ ಪೂಜಾರಿ ಕಿನ್ಯ ಸ್ವಾಗತಿಸಿದರು. ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಸಂಘದ ಸದಸ್ಯರಾದ ಸುಕೇಶ್ ಮಂಜನಾಡಿ, ರಮೇಶ್ ಆಳ್ವ ಹಾಗೂ ದೇವಿಪುರ ಕಾರ್ಯಕ್ರಮ ನಿರೂಪಿಸಿದರು.
ರಾಜೇಂದ್ರ ಶೆಟ್ಟಿ ಕಟ್ಟಾಜೆ ವಂದಿಸಿದರು.
ದುರ್ಗಾಪುರದ ಯಕ್ಷ ಸಭಾಭವನದ ಹೊರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

Exit mobile version