Site icon Ullalavani

ಉಳ್ಳಾಲದ ಓವರ್‌ಬ್ರಿಡ್ಜ್‌–ಉಳ್ಳಾಲಬೈಲ್‌ ರಸ್ತೆ ಅಭಿವೃದ್ಧಿಗೆ ₹30 ಕೋಟಿ; ಮುಂದಿನ ತಿಂಗಳಿಂದ ಕಾಮಗಾರಿ

ಉಳ್ಳಾಲ: ಬಹುಕಾಲದಿಂದ ಉಳ್ಳಾಲದ ಜನರಿಗೆ ತೊಂದರೆಯಾಗುತ್ತಿರುವ ಓವರ್‌ಬ್ರಿಡ್ಜ್‌ ವೃತ್ತದಿಂದ ಉಳ್ಳಾಲಬೈಲ್‌ವರೆಗಿನ ಕಿರಿದಾದ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ₹30 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎರಡು ಬದಿಗಳಲ್ಲಿ 12 ಮೀ. ಎತ್ತರದ ರಿಟೈನಿಂಗ್‌ ವಾಲ್‌ ನಿರ್ಮಿಸಿ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು. ಮುಂದಿನ ತಿಂಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಯು.ಟಿ.ಖಾದರ್‌ ಅಭಿಪ್ರಾಯಪಟ್ಟರು.


ಇಂದು ತೊಕ್ಕೊಟ್ಟು ಓವರ್‌ ಬ್ರಿಡ್ಜ್‌ ನಿಂದ ಉಳ್ಳಾಲಬೈಲಿನವರೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗಳ ಜತೆಗೆ ಎರಡನೇ ಭೇಟಿ ನೀಡಿದ ಸಚಿವರು ಉಳ್ಳಾಲಬೈಲ್‌ ನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದರು.
ಉಳ್ಳಾಲ ನಗರ ಪ್ರದೇಶವು ವೇಗವಾಗಿ ಬೆಳೆಯುತ್ತಿರುವ ಜನವಸತಿ ಪ್ರದೇಶವಾಗಿದ್ದು, ವಿವಿಧ ಊರುಗಳಿಂದ ಆಗಮಿಸಿರುವ ಜನರು ಇಲ್ಲಿ ವ್ಯಾಪಾರ ಹಾಗೂ ವಸತಿ ಉದ್ದೇಶದಿಂದ ನೆಲೆಸಿದ್ದಾರೆ. ಬಂಡಿಕೊಟ್ಯ ದೇವಸ್ಥಾನ, ಸೋಮೇಶ್ವರ ಬೀಚ್‌, ಸಂತ ಸೆಬಾಸ್ತಿಯನ್ನರ ಚರ್ಚ್‌ ಹಾಗೂ ಉಳ್ಳಾಲ ದರ್ಗಾದಂತಹ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳಿರುವುದರಿಂದ ಈ ಭಾಗದಲ್ಲಿ ವಾಹನ ಸಂಚಾರವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅಬ್ಬಕ್ಕ ವೃತ್ತದಿಂದ ಉಳ್ಳಾಲಬೈಲ್‌ವರೆಗೆ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ಮಾಡಲಾಗಿದ್ದು, ಓವರ್‌ಬ್ರಿಡ್ಜ್‌ ಭಾಗದಲ್ಲಿ ಕೆಳಭಾಗದಲ್ಲಿ ಮನೆಗಳಿರುವ ಕಾರಣ ಮಣ್ಣು ತುಂಬಿ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಎರಡೂ ಬದಿಗಳಲ್ಲಿ ಕಾಂಕ್ರೀಟಿಕರಣ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ತಿಂಗಳಿಂದ ಕಾಮಗಾರಿ ಆರಂಭವಾಗಲಿದ್ದು, ಎರಡು ಹೊಸ ಬ್ರಿಡ್ಜ್‌ಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಅವಧಿಯ ಮುಂದಿನ ಎರಡು–ಮೂರು ತಿಂಗಳಲ್ಲಿ ಎರಡು ಸರ್ವಿಸ್‌ ಲೇನ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ವಾಸುಕಿನಗರ ಹಾಗೂ ಒಳಪೇಟೆ ಮೂಲಕ ಓವರ್‌ಬ್ರಿಡ್ಜ್‌ ತಲುಪುವಂತೆ ಒಂದು ಬದಿಯಲ್ಲಿ ಹಾಗೂ ಮತ್ತೊಂದು ಬದಿಯಲ್ಲಿಯೂ ಸರ್ವಿಸ್‌ ಲೇನ್‌ ಕಲ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್‌ ಭಟ್ನಗರ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರ್‌, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಮಿತಾ ಅಶ್ವಿನ್,

ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್‌ , ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಕೋಟೆಕಾರು ವಲಯ ಮಹಿಳಾ ಅಧ್ಯಕ್ಷೆ ತುಳಸಿ ಗಟ್ಟಿ, ಭಾಸ್ಕರ್‌ ತೊಕ್ಕೊಟ್ಟು, ಉಳ್ಳಾಲ ನಗರ ಕಾಂಗ್ರೆಸ್‌ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಅಯೂಬ್‌ ಮಂಚಿಲ, ಅಶ್ರಫ್‌ ಕೋಡಿ, ಬಾಝಿಲ್‌ ಡಿಸೋಜ, ಮನ್ಸೂರ್‌ ಮಂಚಿಲ, ಸುಹಾಸಿನಿ ಬಬ್ಬುಕಟ್ಟೆ, ಯು.ಬಿ.ಸಲೀಂ, ಸ್ವಪ್ನಾ ಹರೀಶ್‌, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ದಾಸ್‌ ಪ್ರಕಾಶ್‌, ಪ್ರೀತಮ್‌, ಗುತ್ತಿಗೆದಾರರಾದ ನಾಗೇಶ್‌, ಕೆ.ಕೆ.ನಾಸೀರ್‌, ಕಾವ್ಯಶ್ರೀ , ಝಿಯಾ, ಮೊದಲಾದವರು ಉಪಸ್ಥಿತರಿದ್ದರು.

ʻಉಳ್ಳಾಲದ ಜೆಟ್ಟಿ ರಸ್ತೆ, ಪ್ಯಾರೀಸ್‌ ರಸ್ತೆ ಅಭಿವೃದ್ಧಿಗೆ ₹13.15 ಕೋಟಿ ಅನುದಾನʼ
ಉಳ್ಳಾಲ ಜೆಟ್ಟಿ ರಸ್ತೆಯ ಅಭಿವೃದ್ಧಿಗೆ ₹4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಮಂಗಳೂರು–ಚೆರ್ವತ್ತೂರು ಕರಾವಳಿ ರಸ್ತೆಯ (ಪ್ಯಾರೀಸ್‌ ರಸ್ತೆ) ಅಭಿವೃದ್ಧಿಗೆ ₹9.15 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಪ್ಯಾರೀಸ್‌ ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ₹6.50 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ₹2.75 ಕೋಟಿಯ ಕಾಮಗಾರಿಯೂ ನಡೆಯಲಿದೆ. ರಸ್ತೆ ಅಗಲೀಕರಣದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದರು.ಪ್ಯಾರೀಸ್‌ ರಸ್ತೆಯಲ್ಲಿ ಸರ್ಕಾರಿ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವವರು ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಟ್ಟು ಕಾಮಗಾರಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು. ಉಳ್ಳಾಲಬೈಲ್‌ ಭಾಗದಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಜಾಗವನ್ನು ರಸ್ತೆ ಅಭಿವೃದ್ಧಿಗಾಗಿ ಬಿಟ್ಟುಕೊಟ್ಟಿರುವುದರಿಂದ ಇಂದು ಉಳ್ಳಾಲವನ್ನು ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗುತ್ತಿದೆ. ಇದೇ ರೀತಿಯಲ್ಲಿ ಉಳ್ಳಾಲದ ಕಿರಿದಾದ ರಸ್ತೆಗಳು ಹಾಗೂ ಚರಂಡಿ ಅವ್ಯವಸ್ಥೆಯಿಂದಾಗಿ ನಗರದ ಮೂಲಸೌಕರ್ಯಕ್ಕೆ ತೊಂದರೆಯಾಗಿತ್ತು. ಇದೀಗ ನೂತನ ಕಾಂಕ್ರೀಟ್‌ ರಸ್ತೆ ನಿರ್ಮಾಣದಿಂದ ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ರಸ್ತೆಯನ್ನು ಕನಿಷ್ಠ 7 ಮೀಟರ್‌ ಅಗಲೀಕರಣಗೊಳಿಸಿ, ಎರಡು ಬಸ್‌ಗಳು ಏಕಕಾಲದಲ್ಲಿ ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದೇ ವೇಳೆ ಉಳ್ಳಾಲ ಒಳಪೇಟೆ ಸರ್ಕಲ್‌ ಪ್ರದೇಶದಲ್ಲಿಯೂ ರಸ್ತೆ ಅಗಲೀಕರಣ ಕೈಗೊಳ್ಳಲಾಗುವುದು. ಈ ಕಾಮಗಾರಿಯಿಂದ ಕೆಲವು ಕಟ್ಟಡ ಮಾಲೀಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದರೂ, ಸಾರ್ವಜನಿಕರ ಮೂಲಸೌಕರ್ಯ ಹಾಗೂ ಸಂಚಾರದ ಅನುಕೂಲಕ್ಕಾಗಿ ಅಗತ್ಯ ಜಾಗವನ್ನು ಬಿಟ್ಟುಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು. ಮಕ್ಕಳು ಶಾಲೆಗೆ ತೆರಳುವಾಗ, ಸಾರ್ವಜನಿಕರು ಮಾರುಕಟ್ಟೆ ಹಾಗೂ ಚರ್ಚ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುವಾಗ ಕಿರಿದಾದ ರಸ್ತೆಯಿಂದ ತೊಂದರೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Exit mobile version