Site icon Ullalavani

ಗಾಂಧೀ ಜಯಂತಿ ಅಂಗವಾಗಿ ಕೊಲ್ಯದಲ್ಲಿ ಸ್ವಚ್ಛತಾ ಅಭಿಯಾನ

ಉಳ್ಳಾಲ, ಅ. 2: ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಸೋಮೇಶ್ವರ ಪುರಸಭೆ ಹಾಗೂ ಶಾರದಾ ಉತ್ಸವ ಸಮಿತಿ, ಕೊಲ್ಯ ಇದರ ಸಹಭಾಗಿತ್ವದಲ್ಲಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ ಕೊಲ್ಯ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಸೋಮೇಶ್ವರ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭ ಮಾತನಾಡಿದ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸಾರ್ವಜನಿಕರು ಮುಂದಿನ ದಿನಗಳಲ್ಲಿಯೂ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಶ್ರಮ ವಹಿಸಬೇಕು. ಮಹಾತ್ಮ ಗಾಂಧೀಜಿಯವರು ಕಂಡಿದ್ದ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಕೌನ್ಸಿಲರ್ ಗೋಪಾಲಕೃಷ್ಣ ಲಾಡ್ ಮಾತನಾಡಿ, “ನಮ್ಮ ದೇಶ ಸ್ವಚ್ಛವಾಗಬೇಕಾದರೆ ಮೊದಲು ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಬೇಕು. ಮನೆ ಸ್ವಚ್ಛವಾದರೆ ಪ್ರದೇಶ, ಪ್ರದೇಶ ಸ್ವಚ್ಛವಾದರೆ ರಾಜ್ಯ, ರಾಜ್ಯ ಸ್ವಚ್ಛವಾದರೆ ಇಡೀ ದೇಶವೇ ಸ್ವಚ್ಛ ಭಾರತವಾಗುತ್ತದೆ” ಎಂದರು. ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತೆಗಾಗಿ ಶ್ರಮಿಸಿರುವುದು ನಾಗರಿಕರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಸೋಮೇಶ್ವರ ಪುರಸಭೆ ಸಿಇಒ ಮತ್ತಡಿ, ಮ್ಯಾನೇಜರ್ ಕೃಷ್ಣ, ಅಧಿಕಾರಿಗಳು ಹಾಗೂ ಸಿಬ್ಬಂದಿ, ಅನಿಲ್ ಕೊಲ್ಯ, ಕೌನ್ಸಿಲರ್‌ಗಳು ಹಾಗೂ ಶಾರದಾ ಉತ್ಸವ ಸಮಿತಿಯ ಪದಾಧಿಕಾರಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Exit mobile version