Site icon Ullalavani

MRPL ಸ್ಫೋಟದ ಸದ್ದು ಮಂಗಳೂರನ್ನೇ ಬೆಚ್ಚಿಬೀಳಿಸಿದೆ: “ಇದಕ್ಕೆ ಕೊನೆ ಯಾವಾಗ?” — ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್

ಮಂಗಳೂರಿನ Mangalore Refinery and Petrochemicals Limited (MRPL)ನಲ್ಲಿ ಸಂಭವಿಸಿರುವ ಭಾರೀ ಸ್ಫೋಟದ ಸದ್ದು ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದೆ. ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಮನೆ, ಮಠ, ಶಾಲಾ ಕೇಂದ್ರಗಳ ಕಟ್ಟಡಗಳಿಗೆ ಬಿರುಕು ಬಿದ್ದು, ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ. ದುರಂತ ಸಂಭವಿಸಿದ ಸ್ಥಳದಲ್ಲಿ ಕಾರ್ಮಿಕರಿಗೆ ಸಾವುನೋವು ಸಂಭವಿಸಿರುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ನಿಖರ ಸಾವುನೋವು ಮತ್ತು ಹಾನಿಯ ವಿವರಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟಪಡಿಸಬೇಕಿದೆ.

ದುರ್ಘಟನೆ ಸಂಭವಿಸಿದ ಬಳಿಕ ಒಂದಷ್ಟು ದಿನ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳು ಮತ್ತು ಕಂಪೆನಿ ಆಡಳಿತದಿಂದ ಪರಿಶೀಲನೆ, ಸಭೆ, ಪರಿಹಾರ ಹಾಗೂ ಭದ್ರತಾ ಕ್ರಮಗಳ ಚರ್ಚೆ ನಡೆಯುತ್ತದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಎಲ್ಲವೂ ಮರೆತುಹೋಗುತ್ತದೆ. ಮತ್ತೆ ಮತ್ತೊಂದು ಘಟನೆ ಸಂಭವಿಸುವವರೆಗೆ ಇದೇ ಚಕ್ರ ಮುಂದುವರಿಯಬೇಕೇ? MRPLನಲ್ಲಿ ಇಂತಹ ಘಟನೆಗಳು ಮೊದಲೇ ನಡೆದಿವೆ; ಸರಕಾರ ಮತ್ತು ಜಿಲ್ಲಾಡಳಿತ ಶಾಶ್ವತ ಹಾಗೂ ವೈಜ್ಞಾನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಂತಹ ಘಟನೆಗಳಿಗೆ ಕೊನೆ ಎಲ್ಲಿದೆ? ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಶ್ನಿಸಿದ್ದಾರೆ.

2016ರಲ್ಲಿಯೇ MRPLನಂತಹ ಸೂಕ್ಷ್ಮ ಕೈಗಾರಿಕಾ ಪ್ರದೇಶಗಳ ಮೇಲಿನ ವಾಯುಪ್ರದೇಶವನ್ನು ‘ನೋ-ಫ್ಲೈ ಝೋನ್’ ಎಂದು ಘೋಷಿಸುವ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಾರ್ಖಾನೆಗಳ ಇಲಾಖೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದ ಬಗ್ಗೆ ವರದಿಯಾಗಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು MRPL ಸೇರಿದಂತೆ ಪ್ರಮುಖ ತೈಲ ಹಾಗೂ ಪೆಟ್ರೋಕೆಮಿಕಲ್ ಘಟಕಗಳ ನಡುವಿನ ಅಂತರ, ಇಂತಹ ಕೈಗಾರಿಕೆಗಳಲ್ಲಿ ಸಂಗ್ರಹವಾಗಿರುವ ಮತ್ತು ಉತ್ಪಾದನೆಯಾಗುವ ದಹನಶೀಲ ವಸ್ತುಗಳು ಹಾಗೂ ವಿಷಕಾರಿ ಅನಿಲಗಳ ಹಿನ್ನೆಲೆಯಲ್ಲಿ ಸಂಭವನೀಯ ದೊಡ್ಡ ಪ್ರಮಾಣದ ಅಪಘಾತಗಳ ಅಪಾಯದ ಕುರಿತು ಆಗಲೇ ಚರ್ಚೆಗಳು ನಡೆದಿದ್ದವು.

ಅಂದಿನ ಆತಂಕಗಳಿಗೆ ಇಂದಿನವರೆಗೆ ಶಾಶ್ವತ ಪರಿಹಾರ ಸಿಕ್ಕಿದೆಯೇ? ಎಂಬ ಪ್ರಶ್ನೆ ಈಗ ಮತ್ತೆ ಎದುರಾಗಿದೆ. ಸೂಕ್ಷ್ಮ ಕೈಗಾರಿಕಾ ಪ್ರದೇಶಗಳ ಸುತ್ತಲಿನ ಜನವಸತಿ, ಶಾಲೆ, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಸುರಕ್ಷತೆಯನ್ನು ವೈಜ್ಞಾನಿಕವಾಗಿ ಮರುಪರಿಶೀಲಿಸುವ ಅಗತ್ಯವಿದೆ. ವಿಪತ್ತು ನಿರ್ವಹಣಾ ಯೋಜನೆ, ತುರ್ತು ಸ್ಥಳಾಂತರ ವ್ಯವಸ್ಥೆ, ಅಗ್ನಿಶಾಮಕ ಮತ್ತು ವೈದ್ಯಕೀಯ ಸಿದ್ಧತೆ, ಕಟ್ಟಡಗಳ ಸುರಕ್ಷತಾ ಪರಿಶೀಲನೆ ಹಾಗೂ ನಿಯಮಿತ ಸುರಕ್ಷತಾ ಲೆಕ್ಕಪರಿಶೋಧನೆಗಳನ್ನು ಕೇವಲ ಕಾಗದದ ಮೇಲಲ್ಲ, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ.

MRPLನ ಪರಿಸರ ಪರಿಣಾಮ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಕಾರ್ಮಿಕರ ಸುರಕ್ಷತೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ವಿವಿಧ ವಿಚಾರಗಳ ಕುರಿತು ಡಿವೈಎಫ್ಐ ಹಾಗೂ ನಾಗರಿಕ ಹೋರಾಟ ಸಮಿತಿಗಳು ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಎತ್ತುತ್ತಾ ಬಂದಿವೆ ಎಂದು ಬಜಾಲ್ ಹೇಳಿದ್ದಾರೆ. ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಜನರ ಜೀವ, ಆರೋಗ್ಯ, ಪರಿಸರ ಮತ್ತು ಕಾರ್ಮಿಕರ ಸುರಕ್ಷತೆಯೂ ಸಮಾನ ಆದ್ಯತೆಯಾಗಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.

ಇಂತಹ ಪ್ರಶ್ನೆಗಳು ಗಂಭೀರವಾಗಿ ಎದುರಾಗಿರುವಾಗ, ಜಿಲ್ಲೆಯ ಜನಪ್ರತಿನಿಧಿಗಳು ಜನರ ಸುರಕ್ಷತೆ ಮತ್ತು ಕೈಗಾರಿಕಾ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟ ಉತ್ತರ ನೀಡುವ ಬದಲು ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ಹೆಸರಿಡಬೇಕು ಎಂಬ ಚರ್ಚೆಯಲ್ಲೇ ನಿರತರಾಗಿರುವುದು ವಿಷಾದನೀಯ ಎಂದು ಬಜಾಲ್ ಟೀಕಿಸಿದ್ದಾರೆ.

“ಇದು ಕೇವಲ ಒಂದು ಸ್ಫೋಟದ ತನಿಖೆಗೆ ಸೀಮಿತವಾಗಬಾರದು. MRPL ಸೇರಿದಂತೆ ಜಿಲ್ಲೆಯ ಎಲ್ಲಾ ಸೂಕ್ಷ್ಮ ಕೈಗಾರಿಕಾ ಘಟಕಗಳ ಸುರಕ್ಷತಾ ವ್ಯವಸ್ಥೆಯನ್ನು ಸ್ವತಂತ್ರವಾಗಿ ಪರಿಶೀಲಿಸಿ, ಲೋಪಗಳು ಕಂಡುಬಂದರೆ ಹೊಣೆಗಾರರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜನರ ಜೀವದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು” ಎಂದು ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

Exit mobile version