Site icon Ullalavani

ತೊಕ್ಕೊಟ್ಟು ರೈಲು ನಿಲ್ದಾಣ ಮರು ಆರಂಭಕ್ಕೆ ಆಗ್ರಹ

ಪ್ರಯಾಣಿಕ ರೈಲುಗಳ ನಿಲುಗಡೆ ಪುನಃ ಕಲ್ಪಿಸಲು ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೊಕ್ಕೊಟ್ಟು ರೈಲು ನಿಲ್ದಾಣದಲ್ಲಿ ಹಿಂದೆ ನಿಲುಗಡೆ ಮಾಡುತ್ತಿದ್ದ ಪ್ರಯಾಣಿಕ ರೈಲುಗಳ ಸೇವೆಯನ್ನು ಪುನಃ ಆರಂಭಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಗಿದೆ.

ತೊಕ್ಕೊಟ್ಟು ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳು ಮತ್ತು ನಗರ ಪ್ರದೇಶಗಳ ಸಾರ್ವಜನಿಕರಿಗೆ ತೊಕ್ಕೊಟ್ಟು ರೈಲು ನಿಲ್ದಾಣವು ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದ್ದು, ಹಿಂದೆ ಇಲ್ಲಿ ಹಲವು ಪ್ರಯಾಣಿಕ ರೈಲುಗಳು ನಿಲುಗಡೆ ಮಾಡುತ್ತಿದ್ದವು. ಇದರಿಂದ ಸ್ಥಳೀಯ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಹಾಗೂ ದೂರದ ಊರುಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಪ್ರಸ್ತುತ ರೈಲುಗಳ ನಿಲುಗಡೆ ಇಲ್ಲದಿರುವುದರಿಂದ ಸಾರ್ವಜನಿಕರು ರೈಲು ಸೇವೆಯನ್ನು ಬಳಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ತೊಕ್ಕೊಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವೇಗವಾಗಿ ಅಭಿವೃದ್ಧಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಇಂಜಿನಿಯರಿಂಗ್ ಕಾಲೇಜುಗಳು, ಕಾರ್ಖಾನೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರೈಲು ಸಂಪರ್ಕದ ಅಗತ್ಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷವಾಗಿ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಸೇರಿದಂತೆ ಪ್ರಮುಖ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಸಮೀಪದಲ್ಲಿವೆ. ಪ್ರತಿದಿನ ಈ ಸಂಸ್ಥೆಗಳಿಗೆ ವಿದ್ಯಾರ್ಥಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ರೋಗಿಗಳು ಹಾಗೂ ಅವರ ಸಂಬಂಧಿಕರು ಸೇರಿದಂತೆ ಅಪಾರ ಸಂಖ್ಯೆಯ ಜನರು ಸಂಚರಿಸುತ್ತಿದ್ದಾರೆ. ದೂರದ ಊರುಗಳಿಂದ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳು ಹಾಗೂ ಅವರ ಕುಟುಂಬಸ್ಥರಿಗೆ ತೊಕ್ಕೊಟ್ಟು ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ದೊರೆತರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ತೊಕ್ಕೊಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿದಿನ ಮಂಗಳೂರು, ಉಳ್ಳಾಲ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ರೈಲು ಸೇವೆ ಅತ್ಯಂತ ಉಪಯುಕ್ತವಾಗಿದ್ದು, ಪ್ರಸ್ತುತ ರೈಲು ನಿಲುಗಡೆ ಇಲ್ಲದಿರುವುದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುತ್ತಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಈ ಹಿನ್ನೆಲೆಯಲ್ಲಿ ತೊಕ್ಕೊಟ್ಟು ರೈಲು ನಿಲ್ದಾಣದ ಪ್ರಸ್ತುತ ಪರಿಸ್ಥಿತಿಯನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸಬೇಕು. ಹಿಂದೆ ಈ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿದ್ದ ರೈಲುಗಳ ವಿವರಗಳನ್ನು ಪರಿಗಣಿಸಿ, ಪ್ರಸ್ತುತ ಪ್ರಯಾಣಿಕರ ಅಗತ್ಯತೆ, ಈ ಭಾಗದ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಹೆಚ್ಚಿನ ಪ್ರಯಾಣಿಕ ರೈಲುಗಳಿಗೆ ತೊಕ್ಕೊಟ್ಟು ನಿಲ್ದಾಣದಲ್ಲಿ ಪುನಃ ನಿಲುಗಡೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತೊಕ್ಕೊಟ್ಟು ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರೈಲುಗಳ ನಿಲುಗಡೆ ಪುನಃ ಆರಂಭವಾದಲ್ಲಿ ತೊಕ್ಕೊಟ್ಟು ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳು ಹಾಗೂ ನಗರ ಪ್ರದೇಶಗಳ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು, ರೋಗಿಗಳು, ಹಿರಿಯ ನಾಗರಿಕರು ಮತ್ತು ನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Exit mobile version