Site icon Ullalavani

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲನೆಗೆ ಸಮಿತಿ ರಚನೆ

ಮಂಗಳೂರು ವಕೀಲರ ಸಂಘದಿಂದ ಸ್ವಾಗತ

ಮಂಗಳೂರು, ಸೆ. 30: ಮಂಗಳೂರು ಹಾಗೂ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವನ್ನು ಮಂಗಳೂರು ವಕೀಲರ ಸಂಘ ಸ್ವಾಗತಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ, ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರು ಹೈಕೋರ್ಟ್‌ಗೆ ಸಂಬಂಧಿಸಿದ ನ್ಯಾಯಾಂಗ ಸೇವೆಗಳಿಗಾಗಿ ಬೆಂಗಳೂರಿಗೆ ತೆರಳಬೇಕಾಗಿರುವುದರಿಂದ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಈ ಭಾಗದ ಜನರಿಗೆ ನ್ಯಾಯದ ಲಭ್ಯತೆ ಮತ್ತಷ್ಟು ಸುಲಭವಾಗಲಿದೆ. ಅಲ್ಲದೆ, ಸಮಯ ಹಾಗೂ ಆರ್ಥಿಕ ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್ ರಚಿಸಿರುವ ಸಮಿತಿಯು ಸಂಬಂಧಪಟ್ಟ ಎಲ್ಲ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವ ನಿರೀಕ್ಷೆ ಮತ್ತಷ್ಟು ಬಲಗೊಂಡಿದೆ ಎಂದು ವಕೀಲರ ಸಂಘ ಅಭಿಪ್ರಾಯಪಟ್ಟಿದೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವ ನಿಟ್ಟಿನಲ್ಲಿ ಮಂಗಳೂರು ವಕೀಲರ ಸಂಘವು ಮುಂದೆಯೂ ಅಗತ್ಯ ಸಹಕಾರ ನೀಡುವುದರೊಂದಿಗೆ ರಚನಾತ್ಮಕ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಜಗದೀಶ್ ಕೆ. ಶೇಣವ ತಿಳಿಸಿದ್ದಾರೆ.

Exit mobile version