
ಉಳ್ಳಾಲ: ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಸಹಜ. ಆದರೆ ಕ್ರೀಡಾಪಟುಗಳು ಶಿಸ್ತು, ತಂಡಭಾವನೆ, ಪರಿಶ್ರಮ, ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಭಾರತದ ಖ್ಯಾತ ಕಬಡ್ಡಿ ಆಟಗಾರ ಹಾಗೂ ತರಬೇತುದಾರ ಜಗದೀಶ್ ಕುಂಬ್ಳೆ ಅಭಿಪ್ರಾಯಪಟ್ಟರು.
ಅವರು ಅಡ್ಯಾರ್ನ ದಿ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಯ ಆತಿಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐಸಿಎಸ್ಇ ಹಾಗೂ ಸಿಬಿಎಸ್ಇ ಶಾಲೆಗಳ ಒಕ್ಕೂಟದ ‘ದಿ ಅಲ್ಫಾಸ್’ ಕಿರಿಯ ಬಾಲಕರ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ಬೆಳೆಸುತ್ತದೆ. ತಂಡವಾಗಿ ಆಡುವಾಗ ಪರಸ್ಪರ ಸಹಕಾರ, ಸಹನೆ, ಜವಾಬ್ದಾರಿ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಗೆಲುವಿನ ಸಂದರ್ಭದಲ್ಲಿ ವಿನಯವನ್ನು ಹಾಗೂ ಸೋಲಿನ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಾಪಾಡಿಕೊಂಡು, ಪ್ರತಿಯೊಂದು ಪಂದ್ಯವನ್ನೂ ಕಲಿಕೆಯ ಅವಕಾಶವಾಗಿ ಸ್ವೀಕರಿಸಬೇಕು ಎಂದು ಅವರು ಕ್ರೀಡಾಪಟುಗಳಿಗೆ ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಐಸಿಎಸ್ಇ ಕ್ರೀಡಾ ಕಾರ್ಯದರ್ಶಿ ಹಾಗೂ ಶ್ರೀ ರವಿಶಂಕರ್ ವಿದ್ಯಾಮಂದಿರದ ಪ್ರಾಂಶುಪಾಲರಾದ ಸುರೇಶ್ ಮಹಾಲಿಂಗಪುರ ಅವರು ಅತಿಥಿಯಾಗಿದ್ದರು. ಟಿಸಿಐಎಸ್ ಶಾಲೆಯ ನಿರ್ದೇಶಕರಾದ ರಮೀಝ್ ಅಹಮ್ಮದ್ ಉಪಸ್ಥಿತರಿದ್ದರು.
ಟಿಸಿಐಎಸ್ ಶಾಲೆಯ ಕ್ರೀಡಾ ಸಚಿವರಾದ ಶಾಹಿನ್ ಅವರ ನೇತೃತ್ವದಲ್ಲಿ ಆಟಗಾರರು ಪ್ರಮಾಣವಚನ ಸ್ವೀಕರಿಸಿದರು.
ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ಸ್ವಾಗತಿಸಿದರು. ನಿರೂಪಣೆಯನ್ನು ಕುಮಾರಿ ಮನೀಷಾ ಹಾಗೂ ಪೂರ್ಣಿಮಾ ನೆರವೇರಿಸಿದರು.
ಚಾಂಪಿಯನ್ಶಿಪ್ ಟ್ರೋಫಿಯನ್ನು ಬೆಥನಿ ಶಾಲೆ, ಕಿನ್ನಿಕಂಬಳ ತನ್ನದಾಗಿಸಿಕೊಂಡರೆ, ರನ್ನರ್ಅಪ್ ಪ್ರಶಸ್ತಿಯನ್ನು ಕೆನರಾ ಹೈಸ್ಕೂಲ್, ಡೊಂಗರಕೇರಿ ಪಡೆದುಕೊಂಡಿತು. ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಬೆಥನಿ ಶಾಲೆಯ ವಿಜೇಶ್ ಡಿ. ಶೆಟ್ಟಿ ಅವರು ಪಡೆದರು.