Site icon Ullalavani

ಮಂಗಳೂರು : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಜೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್…!

ಮಂಗಳೂರು: ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಅಮಾನತ್ತುಪಡಿಸಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಅಮಾನತ್ತುಪಡಿಸಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರು ದೂರುದಾರರಿಂದ ಒಟ್ಟು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಪೈಕಿ ಈಗಾಗಲೇ 15 ಸಾವಿರ ರೂಪಾಯಿ ಲಂಚದ ಹಣವನ್ನು ಮುಂಗಡವಾಗಿ ಸ್ವೀಕರಿಸಿದ್ದರು. ಬಳಿಕ ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಕುರಿತು ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಸೆ.21 ರಂದು ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ 5 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಬಜ್ಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರನ್ನು ಬಲೆಗೆ ಬೀಳಿಸಿದ್ದಾರೆ.

ಮಂಗಳೂರು ಲೋಕಾಯುಕ್ತ ಪೊಲೀಸರು ಆರೋಪಿ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Exit mobile version