Site icon Ullalavani

ಅಸೈಗೋಳಿ : ಹಿರಿಯ ನಿವೃತ್ತ ಶಿಕ್ಷಕಿ ಬೆನ್ನಿ ಡಿ’ಸೋಜ ನಿಧನ

ಅಸೈಗೋಳಿ: ಅಸೈಗೋಳಿ ಪರಿಸರದ ಹಿರಿಯ ಹಾಗೂ ಪ್ರಸಿದ್ಧ ನಿವೃತ್ತ ಶಿಕ್ಷಕಿ ಕುಮಾರಿ ಬೆನ್ನಿ ಡಿಸೋಜ (92) ಅವರು ಸೆ.18ರಂದು ಬೆಳಿಗ್ಗೆ ಅಸೈಗೋಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅಸೈಗೋಳಿ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 44 ವರ್ಷಗಳ ಕಾಲ ನಿಸ್ವಾರ್ಥ ಹಾಗೂ ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬೆನ್ನಿ ಡಿಸೋಜ ಅವರು ಬಳಿಕ ನಿವೃತ್ತರಾಗಿದ್ದರು. ಅಸೈಗೋಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

1982ರಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಗುಂಡೂರಾವ್ ಅವರಿಂದ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿದ್ದ ಅವರು, ತಮ್ಮ ಶೈಕ್ಷಣಿಕ ಸೇವೆಯ ಮೂಲಕ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ಶಿಕ್ಷಣ ಕ್ಷೇತ್ರದ ಸೇವೆಯ ಜೊತೆಗೆ ಅಸೈಗೋಳಿ ಪರಿಸರದ ಬಡವರು ಹಾಗೂ ದೀನದಲಿತರ ಸೇವೆಯಲ್ಲಿಯೂ ಬೆನ್ನಿ ಟೀಚರ್ ಎಂದೇ ಪ್ರಸಿದ್ಧರಾಗಿದ್ದರು. ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ, ಸರ್ಕಾರಿ ಸೇವೆ, ರಾಜಕೀಯ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸರಳತೆ, ನಿಸ್ವಾರ್ಥ ಸೇವೆ ಹಾಗೂ ಶಿಕ್ಷಣದ ಮೇಲಿನ ಅಪಾರ ಕಾಳಜಿಯಿಂದ ಜನಮನ್ನಣೆ ಗಳಿಸಿದ್ದ ಬೆನ್ನಿ ಡಿಸೋಜ ಅವರ ನಿಧನಕ್ಕೆ ಅಸೈಗೋಳಿ ಪರಿಸರದ ಜನರು ಹಾಗೂ ಹಳೆಯ ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version