ಜೀವನದಲ್ಲಿ ನಾವು ನಮ್ಮಲ್ಲಿನ ಕೊರತೆಗಳ ಬಗ್ಗೆಯೇ ಚಿಂತಿಸುವುದನ್ನು ಬಿಟ್ಟು ಇರುವ ವಸ್ತು, ವಿಷಯ ಅಥವಾ ಸಾಮರ್ಥ್ಯವನ್ನು ಸೂಕ್ತವಾದ ಮಾರ್ಗದಲ್ಲಿ ಸದುಪಯೋಗ ಪಡಿಸಿಕೊಂಡು ಗೆಲ್ಲುವುದೇ ಜಾಣತನ. ಜೀವನದ ಬಗ್ಗೆ ಕನಸುಗಳಿದ್ದಾಗ, ಅದನ್ನು ಸಾಧಿಸುವ ನಿಟ್ಟಿನಲ್ಲಿ ಛಲ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇರುವಾಗ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ವಾಣಿಜ್ಯ ಕ್ಷೇತ್ರದಲ್ಲಿ ಇಂದು ವಿದ್ಯಾರ್ಥಿಗಳಿಗೆ ವಿವಿಧ ಅವಕಾಶಗಳಿವೆ. ವಿದ್ಯಾರ್ಥಿ ಜೀವನದಲ್ಲಿ ನಾವು ಶಿಸ್ತನ್ನು ಅಳವಡಿಸಿಕೊಂಡಾಗ ಆ ಶಿಸ್ತು ಔದ್ಯೋಗಿಕ ಕ್ಷೇತ್ರದಲ್ಲೂ ನಮ್ಮನ್ನು ಗೆಲ್ಲಿಸುತ್ತದೆ. ಪಠ್ಯ ಚಟುವಟಿಕೆಗಳ ಜೊತೆಜೊತೆಗೆ ವಾಣಿಜ್ಯ ಕ್ಷೇತ್ರದ ದೈನಂದಿನ ಬೆಳವಣಿಗೆಗಳು ಮತ್ತು ಆಗುಹೋಗುಗಳ ಪ್ರಾಯೋಗಿಕ ಜ್ಞಾನಗಳನ್ನು ಪಡೆಯುತ್ತಿದ್ದರೆ ಉತ್ತಮ ಭವಿಷ್ಯವಿದೆ. ವಾಣಿಜ್ಯ ಸಂಘದ ಚಟುವಟಿಕೆಗಳು ಇದಕ್ಕೆ ಪೂರಕ. ಯಶಸ್ಸು ಸಾಧಿಸುವ ಬಗ್ಗೆ ಜೀವನದಲ್ಲಿ ಆಶಾವಾದ
ಇರಬೇಕು”. ಎಂದು ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಾಗೂ ನಂತೂರಿನ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ ಹೇಳಿದರು.
ಸಂಸ್ಥೆಯಲ್ಲಿ ಈ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಜೆ. ಎಸ್. ಕಾಲೇಜಿನ ಉಪನ್ಯಾಸಕ
ನರೇಂದ್ರ, ” ಜಾಗತೀಕರಣ, ಡಿಜಿಟಲೀಕರಣ ಹಾಗೂ ಆಧುನಿಕ ಸಂವಹನ ಸಂಪರ್ಕಗಳ ಪ್ರಭಾವದಿಂದ ವ್ಯಾಪಾರ ಕ್ಷೇತ್ರದಲ್ಲಿ ವೇಗದ ಬದಲಾವಣಿಗಳಾಗುತ್ತಿದೆ. ಹಾಗಾಗಿ ಹೊಸ ಹೊಸ ಮಾದರಿಯ ಮಾರುಕಟ್ಟೆ ವ್ಯವಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವುದರ ಜೊತೆ ಜೊತೆಗೆ
ಬದಲಾಗುತ್ತಿರುವ ವಾಣಿಜ್ಯ ಟ್ರೆಂಡ್ ಗಳ ಬಗೆಗೂ ತಿಳಿಯುತ್ತಿರಬೇಕು” ಎಂದರು.
ಈ ಸಂದರ್ಭ ವಾಣಿಜ್ಯ ಸಂಘದ ಸದಸ್ಯೆ ವಿದ್ಯಾರ್ಥಿಗಳ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅರ್ಥಪೂರ್ಣ ವಸ್ತುಗಳು ಹಾಗೂ ಮಾದರಿಗಳನ್ನು ಪ್ರದರ್ಶಿಸಿದ್ದರು.
ಸಂಸ್ಥೆಯ ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ವಾಣಿಜ್ಯ ಸಂಘದ ಪದಾಧಿಕಾರಿ ಉಪನ್ಯಾಸಕರುಗಳಾದ ವೀಣಾ ಉಳ್ಳಾಲ್, ಡಾ. ಸುಕನ್ಯ ಎನ್., ಸಂತೋಷ್ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಸಂಘದ ಉಸ್ತುವಾರಿ ಶಕುಂತಲಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು, ಶ್ರೀಶ ಆಚಾರ್ಯ ಸ್ವಾಗತಿಸಿದರು, ಫಾತಿಮ ಸೌಹಾನ ವಂದಿಸಿದರು, ಸ್ಕಂದ ಶೆಟ್ಟಿ ನಿರ್ವಹಿಸಿದರು.