ವರ್ಕಾಡಿ: ಇಲ್ಲಿನ ಬಾವಳಿಗುಳಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ 12ನೇ ವರ್ಷದ ಶ್ರೀ ಗಣೇಶೋತ್ಸವ ಸೆ. 14ರಂದು ನಡೆಯಲಿದೆ. ಬೆಳಗ್ಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶಕೃಷ್ಣ ತಂತ್ರಿಯವರ ಮುಂದಾಳುತ್ವದಲ್ಲಿ ವಿಧಿವಿಧಾನಗಳು ಜರಗಲಿವೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ, ಶ್ರೀ ಮಹಮ್ಮಾಯ ಭಜಕ ವೃಂದ ಶಾಂತಿಪಳಿಕೆ ಇವರಿಂದ ಭಜನಾ ಸಂಕೀರ್ತನೆ, ಬೆಳಗ್ಗೆ 11.30ಕ್ಕೆ ದತ್ತಾಂಜನೇಯ ರಾಮಾಡಿ ಕಣ್ವತೀರ್ಥ 70ಕಲಾವಿದರ ಒಟ್ಟು ಸೇರುವಿಕೆಯಲ್ಲಿ ಭರತ ವರ್ಷ ವೈಭವ ನೆರವೇರಲಿದೆ. ಮಧ್ಯಾಹ್ನ 1.30ರಿಂದ ಫ್ರೆಂಡ್ಸ್ ಮಂಗಳೂರು ಇವರಿಂದ ತೆಲಿಕೆ ಬಾಯಿ ನೀಲಿಕೆ ಎಂಬ ಹಾಸ್ಯ ಕಾರ್ಯಕ್ರಮ, ಅಪರಾಹ್ನ 3.30ರಿಂದ ಶ್ರೀದುರ್ಗಾ ನಾಟ್ಯಾಲಯ ಇವರಿಂದ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಸಂಗಮ ಬಳಿಕ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯ ಖಾತೆ ಸಚಿವ ಯು.ಟಿ. ಖಾದರ್ ಅವರಿಗೆ ವಿಶೇಷ ಗೌರವಾಭಿನಂದನೆ ನಡೆಯಲಿದೆ. ಜೊತೆಗೆ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾ ಕೇಂದ್ರದ ಸಂಚಾಲಕ ಟಿ. ಜಿ. ರಾಜಾರಾಮ ಭಟ್, ನರಿಂಗಾನ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ನವಾಜ್ ನರಿಂಗಾನ, ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಮೊಕ್ತೇಸರ ಚಂದ್ರಹಾಸ ಶೆಟ್ಟಿ ಮೋರ್ಲ, ಧಾರ್ಮಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ಚಲನಚಿತ್ರ ನಿರ್ದೇಶಕ ಜೆ.ಪಿ. ತೂಮಿನಾಡು ಹಾಗೂ ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಅವರನ್ನು ಸನ್ಮಾನಿಸಲಾಗುವುದು. ನಂತರ ಗಣಪತಿ ಪೂಜೆ, ಸುಡುಮದ್ದು ಸೇವೆ ನಡೆದು ಗಣೇಶನ ಭವ್ಯ ಶೋಭಾಯಾತ್ರೆಯು ಕೆದುಂಬಾಡಿ, ನೆತ್ತಿಲಪದವು, ಬಾವಲಿಗುಳಿ, ತೌಡುಗೋಳಿಯಾಗಿ ಶಾಂತಿಪಳಿಕೆ ಮಾರಿಗುಡಿ ಬಳಿಯ ಕೆರೆಯಲ್ಲಿ ವಿಸರ್ಜಿಸಲಾಗುವುದು.