Site icon Ullalavani

ಹತ್ಯೆ ನಡೆಸಲು ಬಂದವನೇ ಕೊಲೆಗೀಡಾದ!

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ತೊಕ್ಕೊಟ್ಟುವಿನಲ್ಲಿ ನಡುರಾತ್ರಿಯಲ್ಲಿ ಬರ್ಬರವಾಗಿ ತಲವಾರು ದಾಳಿಗೊಳಗಾಗಿ ಹತ್ಯೆಗೀ ಡಾದ ರೌಡಿಶೀಟರ್ ಕೋಡಿಕಲ್ ನಿವಾಸಿ ವಿಕ್ರಂ ಬೋಳಾರ (29) ಖುದ್ದು ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಸೈಕೋ ವಿಕ್ಕಿಯನ್ನು ಹತ್ಯೆ ನಡೆಸಲು ಕುಂಪಲಕ್ಕೆ ಬಂದಿದ್ದ. ವಿಪರ್ಯಾಸವೆಂದರೆ ಹತ್ಯೆ ನಡೆಸಲು ಬಂದವನೇ ಹೆಣವಾಗಿ ಹೋಗಿದ್ದಾನೆ.

ಮೆಹಂದಿ ಮನೆಯಲ್ಲಿ ನಡೆದಿತ್ತು ಗಲಾಟೆ:

ಭಾನುವಾರ ರಾತ್ರಿ ಕುಂಪಲ ವಿದ್ಯಾ ನಗರ ನಿವಾಸಿ ರೋಹಿತ್ ಗಟ್ಟಿ ಎಂಬಾತನ ವಿವಾಹದ ಮೆಹಂದಿ ಕಾರ್ಯಕ್ರಮವಿತ್ತು. ಅಲ್ಲಿ ಸೈಕೋ ವಿಕ್ಕಿ ಸಹಿತ ಆತನ ಬಣದ ಸುಮಾರು 30ರಷ್ಟು ಮಂದಿ ಪಾರ್ಟಿ ಯಲ್ಲಿ ಭಾಗವಹಿಸಿದ್ದರು. ಪಾರ್ಟಿ ನಡೆಯುತ್ತಿದ್ದಂತೆ ಕ್ಷುಲ್ಲಕ ವಿಚಾರ ದಲ್ಲಿ ಅವರ ತಂಡದೊಳಗೆ ಗಲಾಟೆ ನಡೆದಿತ್ತು. ಇದನ್ನು ರೌಡಿಗಳ ವಿರೋಧಿ ಬಣಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಯುವಕನೋರ್ವ ಬೋಳಾರ ತಂಡದ ವಿಕ್ರಂ ಬೋಳಾರನಿಗೆ ಸುದ್ಧಿ ಮುಟ್ಟಿಸಿದ್ದ.

ಅಲ್ಲದೆ `ಸೈಕೋ ಭಾರೀ ಹಾರಾಟ ನಡೆಸುತ್ತಿ ದ್ದಾನೆ, ಆತನಿಗೆ ಒಂದು ಗತಿ ಕಾಣಿಸಬೇಕು ಅಂದಿದ್ದ’ ನಂತೆ.

ಬಜಿಲಕೇರಿಯಲ್ಲಿ ನಡೆಯುತಿತ್ತು ಪಾರ್ಟಿ:

ಮಂಗಳೂರು ದಸರಾದಲ್ಲಿ ಭಾಗವಹಿಸಿದ್ದ ಹುಲಿ ವೇಷಧಾರಿ ಗಳಿಗಾಗಿ ಬಜಿಲಕೇರಿಯಲ್ಲಿ ಗುಂಡಿನ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬೋಳಾರದ ತಂಡ ಪಾಲ್ಗೊಂಡಿತ್ತು. ಅಲ್ಲಿ ಬೋಳಾರ ವಿಕ್ರಂ ಕೂಡಾ ಭಾಗಿಯಾಗಿದ್ದ.

ಅದೇ ಹೊತ್ತಿಗೆ ತಮ್ಮದೇ ಪರಿಚಯದ ಹುಡುಗನ ಮೊಬೈಲ್ ಕರೆ ಕುಂಪಲದಿಂದ ಬಂದಿತ್ತು. ಈ ಕರೆ ವಿಕ್ರಂನನ್ನು ಕೆರಳಿಸಿದ್ದು, ಸುದ್ಧಿ ತಿಳಿದ ತಕ್ಷಣ ನಶೆಯಲ್ಲಿದ್ದ ವಿಕ್ರಂ, ಸೈಕೋ ವಿಕ್ಕಿಯನ್ನು ಹತ್ಯೆ ನಡೆಸಿಯೇ ಸಿದ್ಧ’ ಅಂದುಕೊಂಡು ಮಧ್ಯರಾತ್ರಿಯಲ್ಲೇ ಜತೆಗಿದ್ದ ಚರಣ್, ಅಭಿಷೇಕ್ ಶೆಟ್ಟಿ ಜೊತೆ ಸೇರಿಸಿಕೊಂಡು ಎರಡು ತಲವಾರು ಹಿಡಿದುಕೊಂಡು ಎಫ್‍ಝೀ ಬೈಕಿನಲ್ಲಿ ಮಂಗಳೂರಿ ನಿಂದ ಕುಂಪಲಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಹೊರಡುವ ಮುನ್ನ ಪಾರ್ಟಿಯಲ್ಲಿದ್ದ ಇತರರು ವಿಕ್ರಂನನ್ನು ತಡೆದಿದ್ದು, ಇವತ್ತು ಬೇಡ ಅಲ್ಲಿ ತಂಡದಲ್ಲಿ 40ರಷ್ಟು ಮಂದಿ ಇರಬಹುದು. ಎಚ್ಚರ ವಹಿಸಿ ಎಂದು ಬುದ್ಧಿವಾದ ಹೇಳಿದ್ದರು. ಆದರೆ ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿದ್ದ ವಿಕ್ರಂ ತ್ರಿಬಲ್ ರೈಡ್‍ನಲ್ಲಿ ಹೊರಟಿದ್ದ.

ಗಲಾಟೆ ನಿಲ್ಲಿಸಿದ್ದ ಮದುಮಗ:

ಇತ್ತ ಕುಂಪಲದ ಮದುವೆ ಮನೆಯಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ಮದುಮಗ ಗಲಾಟೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದ. ಅಲ್ಲದೆ ಗಲಾಟೆ ಜೋರಾದಲ್ಲಿ ಮದುವೆಯೇ ಮುರಿದು ಬೀಳಬಹುದು ಅನ್ನುವ ಕಾರಣವನ್ನು ಮುಂದಿಟ್ಟು ಗಲಾಟೆ ನಡೆಸುತ್ತಿದ್ದವರನ್ನು ಸಮಾಧಾನಿಸಿ ಮನೆಯಿಂದ ಕಳುಹಿಸುವಲ್ಲಿ ಯಶಸ್ವಿಯಾಗಿದ್ದ. ಅದರಂತೆ 30 ಮಂದಿಯ ತಂಡ ಸ್ಕಾರ್ಪಿಯೋ ವಾಹನ ಸೇರಿದಂತೆ ನಾಲ್ಕು ವಾಹನಗಳಲ್ಲಿ ಮಂಗಳೂರಿಗೆ ಹೊರಟಿದ್ದರು.

ವಿರೋಧಿ ಬಣದ ವಾಹನಗಳಿಗೆ ಎದುರಾಗಿದ್ದ ಬೈಕ್ :

ಮಂಗಳೂರಿನಿಂದ ಕುಂಪಲದವರೆಗೆ ಬೈಕಿನಲ್ಲಿ ಹೊರಟಿದ್ದ ವಿಕ್ರಂ ಬೋಳೂರು ಕುಂಪಲ ಬೈಪಾಸ್ ತಲುಪುತ್ತಿದ್ದಂತೆ ಎದುರಿನಿಂದ ವಿರೋಧಿ ಬಣಗಳ ಕಾರುಗಳು ಎದುರಾಗಿತ್ತು. ಆದರೆ ಕೊನೆಯಲ್ಲಿದ್ದ ಸ್ಕಾರ್ಪಿಯೋ ವಾಹನದಲ್ಲಿದ್ದ ಸೈಕೋ ವಿಕ್ಕಿ ಮತ್ತು ಇತರರು ಬೈಕಿನಲ್ಲಿದ್ದ ವಿಕ್ರಂ ಮತ್ತು ಇತರ ಮೂವರನ್ನು ಕಂಡು ಗುರುತು ಹಿಡಿದಿದ್ದರು. ಅವರ ಕೈಯಲ್ಲಿದ್ದ ತಲವಾರು ಕಂಡು ಅಪಾಯವರಿತ ಸೈಕೋ ತಂಡ ಅವರನ್ನೇ ಮುಗಿಸುವ ಪ್ಲಾನ್ ಮಾಡಿ ಸ್ಕಾರ್ಪಿಯೋ ವಾಹನದಲ್ಲಿ ಬೈಕನ್ನು ಹಿಂಬಾಲಿಸಲು ಶುರು ಹಚ್ಚಿದ್ದರು. ಆದರೆ ಯಾವಾಗ ಬೈಕ್‍ನಲ್ಲಿದ್ದ ವಿಕ್ರಂ ಬೋಳೂರು ಹಾಗೂ ಆತನ ಇಬ್ಬರು ಸಹಚರರಿಗೆ ತಮ್ಮನ್ನೇ ಶತ್ರು ತಂಡದವರು ಬೆನ್ನಟ್ಟಿ ಬರುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತೋ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.

ಸೈಕೋತಂಡದಿಂದ ತಪ್ಪಿಸಿ ಕೊಳ್ಳಲು ಬೈಕನ್ನು ರಾ.ಹೆ.ಯಲ್ಲಿ ಚಲಾಯಿಸಿ ಮಂಗಳೂರು ಕಡೆಗೆ ಬರಲೆತ್ನಿಸಿದ್ದ. ಆದರೆ ಸ್ಕಾರ್ಪಿಯೋ ವಾಹನದ ವೇಗಕ್ಕೆ ತಪ್ಪಿಸಲು ಸಾಧ್ಯವಾಗದೆ ತೊಕ್ಕೊಟ್ಟುವಿನಿಂದ ರಸ್ತೆ ಬದಲಿಸಿ ವಿಶ್ವವಿದ್ಯಾನಿಲಯದ ಕಡೆಗೆ ಬೈಕನ್ನು ಚಲಾಯಿಸಲು ಯತ್ನಿಸಿದ್ದರು. ಆದರೆ ದುರದೃಷ್ಟವಶಾತ್ ಬೈಕ್ ವಿನಮ್ರ ಬಾರಿನ ಎದುರುಗಡೆ ತಲುಪುತ್ತಿದ್ದಂತೆ ಆಯ ತಪ್ಪಿ ಕೆಳಕ್ಕೆ ಉರುಳಿದೆ. ಈ ವೇಳೆ ಅಭಿಷೇಕ್ ಮತ್ತು ಚರಣ್ ಓಡಿ ಪರಾರಿಯಾಗಿದ್ದು, ವಿಕ್ರಂ ಮಾತ್ರ ಓರ್ವನೇ ಸೈಕೋ ವಿಕ್ಕಿ ತಂಡದ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಸ್ಕಾರ್ಪಿಯೋದಲ್ಲಿದ್ದ ಮೂವರು ವಿಕ್ರಂನನ್ನು ತಲವಾರಿನಿಂದ ಯದ್ವಾತದ್ವ ಕಡಿದು ಸ್ಥಳದಲ್ಲೇ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ.

10 ಪ್ರಕರಣಗಳಿತ್ತು:

ಗ್ಯಾಂಗ್ ವಾರ್‍ಗಳಲ್ಲಿ ಸಕ್ರಿಯನಾಗಿದ್ದ ಹತ್ಯೆಗೀಡಾದ ವಿಕ್ರಂನ ಮೇಲೆ ಎರಡು ಕೊಲೆ ಆರೋಪ, ಕೊಲೆಯತ್ನ, ಹಲ್ಲೆ ಸೇರಿದಂತೆ 10 ಪ್ರಕರಣಗಳು ಬರ್ಕೆ, ಉರ್ವ ಸೇರಿದಂತೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿತ್ತು. 2010ರಲ್ಲಿ ಅಳಕೆಯಲ್ಲಿ ಜಾನ್ ಪಿಂಟೋ ಕೊಲೆ ಪ್ರಕರಣ ಮತ್ತು 2012ರಲ್ಲಿ ಬಿಜೈ ರಾಜಾ ಹತ್ಯೆ ಪ್ರಕರಣದಲ್ಲಿ ಪರೋಕ್ಷವಾಗಿ ಬೆಂಬಲಿಸಿದ ಆರೋಪದಲ್ಲಿ ಆರೋಪಿಯಾಗಿದ್ದ. ಇದರಲ್ಲಿ ಜಾನ್ ಪಿಂಟೋ ಪ್ರಕರಣ ಬಿಟ್ಟು ಹೋಗಿದ್ದರೆ, ಬಿಜೈ ರಾಜಾ ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೋರಿ ಅಶೋಕ್ ಶೆಟ್ಟಿ ಸಹೋದರ ಪ್ರದೀಪ್ ಶೆಟ್ಟಿ ಕೊಲೆಯತ್ನ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದನು.

ನಟೋರಿಯಸ್ ಸೈಕೋ:

ಹುಬ್ಬಳ್ಳಿ ಮೂಲದವನಾಗಿರುವ ಆರೋಪಿ ಸೈಕೋ ವಿಕ್ಕಿ ಮೇಲೆ ಹುಬ್ಬಳ್ಳಿಯಲ್ಲಿ ಹಲವು ಪ್ರಕರಣಗಳಿವೆ. ಕೆಲ ದಿನಗಳ ಹಿಂದೆ ಅಳಕೆಯಲ್ಲಿ ಕುದ್ರೋಳಿ ದ್ವಾರದ ಬಳಿ ಇದೇ ಸೈಕೋ ವಿಕ್ಕಿಯ ಗ್ಯಾಂಗ್ ಇಂದ್ರಜಿತ್ ಮತ್ತು ಲತೀಷ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಆದರ ನಂತರ ಹಲ್ಲೆಯಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರಾದರೂ ಕೂಡಾ ಪ್ರಮುಖ ಆರೋಪಿ ಸೈಕೋ ವಿಕ್ಕಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಆತನಿಗೆ ಬಲೆ ಬೀಸಿದ್ದೇವೆ, ಆದರೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಸಮರ್ಪಕ ಮಹಿತಿ ಲಭ್ಯವಾಗಿಲ್ಲ ಎಂಬ ಉತ್ತರ ಕೇಳಿಬರುತ್ತಿತ್ತು. ವಿಪರ್ಯಾಸ ಎಂಬಂತೆ ಸೈಕೊ ವಿಕ್ಕಿ ಮಾತ್ರ ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ತಾನು ಗೋವಾ, ಪೂಣೆ, ಮುಂಬೈನಲ್ಲಿರುವ ಬಗ್ಗೆ ದಿನಕ್ಕೊಂದು ಸ್ಟೇಟಸ್ ಮತ್ತು ಫೋಟೋ ಅಪ್‍ಲೋಡ್ ಮಾಡುತ್ತಲೇ ಇದ್ದ. ಈ ಬಗ್ಗೆ ವರದಿಯೊಂದರಲ್ಲಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೂಡಾ ಪತ್ರಿಕೆ ಈ ಮೊದಲೇ ನೀಡಿತ್ತು. ಆದರೆ ಇಲಾಖೆ ಮಾತ್ರ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ ಹಾಗಾಗಿ ಈ ಇದೇ ತಂಡಗಳ ನಡುವಿನ ವೈಷಮ್ಯ ಹತ್ಯೆ ವರೆಗೆ ಬಂದು ನಿಂತಿದೆ.

ಕೃತ್ಯದಲ್ಲಿ ಸೈಕೋ ವಿಕ್ಕಿ, ಗೌರೀಶ್ ಮತ್ತು ಗೌತಂ ಎಂಬವರು ಭಾಗಿ ಯಾಗಿದ್ದರೆನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ ಯಾದರೂ, ದೀಪು, ಮಂಜು, ಶಿವ, ಅರಸು ಮತ್ತು ಇತರರು ಭಾಗಿಯಾಗಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ , ಉಳ್ಳಾಲ ಎಸ್.ಐ ಭಾರತಿ ಹಾಗೂ ಶ್ವಾನದಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಉಳ್ಳಾಲ ಪೊಲೀಸರು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಿರೋಧಿಗಳಾದರು!

ಹತ್ಯೆಗೀಡಾದ ವಿಕ್ಕಿ ಬೋಳಾರ ಯಾನೆ ವಿಕ್ರಂ.ಆರ್ ಮತ್ತು ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಕೋರಿ ಅಶೋಕ ಎಂಬಾತನ ಕುರಿತು ವಿಕ್ರಂ ಮಾತನಾಡಿರುವ ವಿಚಾರವನ್ನು ಸೈಕೋ ವಿಕ್ಕಿ ಆತನಲ್ಲಿ ತಿಳಿಸಿದ್ದು, ಅದಕ್ಕೆ ಪ್ರತಿಯಾಗಿ ವಿಕ್ರಂ ಮತ್ತು ತಂಡ ಸೈಕೋ ವಿಕ್ಕಿಯನ್ನು ಅಳಕೆ ಬಳಿ ಕರೆಸಿ ಹಲ್ಲೆ ನಡೆಸಿತ್ತು. ಆನಂತರದ ದಿನಗಳಲ್ಲಿ ಸೈಕೋ ವಿಕ್ರಂ ಬೋಳಾರ ನೊಂದಿಗೆ ವಿರೋಧ ಕಟ್ಟಿಕೊಂಡು ಹತ್ಯೆಗೆ ಸ್ಕೆಚ್ ಹಾಕುತ್ತಿದ್ದ. ಅಲ್ಲದೆ ಕೆಲ ದಿನಗಳ ಹಿಂದಷ್ಟೇ ಸೈಕೋ, ಬೋಳಾರ ತಂಡದ ಲತೀಶ್ ಎಂಬಾತನನ್ನು ಕೊಲೆ ನಡೆಸಲು ಹೋಗಿ ವಿಫಲನಾಗಿದ್ದ. ಇದೀಗ ಅದೇ ತಂಡ ವಿಕ್ರಂನನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ.

Exit mobile version