Site icon Ullalavani

ಬೀಡಿ ನಿಷೇಧಿಸಲು ಹೊರಟಿರುವುದು ಸಮಂಜಸವಲ್ಲ:ಬಾಲಕೃಷ್ಣ ಶೆಟ್ಟಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಜಿಲ್ಲೆಯ ಜನರಿಗೆ ಕೃಷಿ ಬಿಟ್ಟರೆ, ಬೀಡಿ ಉದ್ಯಮ ಪ್ರಮುಖ ಉದ್ಯೋಗವಾಗಿದ್ದು, ಅದನ್ನೇ ಮುಚ್ಚಲು ಹೊರಟಿರುವ ಸರಕಾರ 3 ಕೋಟಿ ಕಾರ್ಮಿಕರನ್ನು ಉಪವಾಸದಿಂದ ಬದುಕಲು ಯತ್ನಿಸುತ್ತಿದೆ ಎಂದು ಜಿಲ್ಲಾ ಬೀಡಿ ಫೆಡರೇಶನ್ನಿನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಉಳ್ಳಾಲದ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸೋಮವಾರ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ ಕೋಪ್ಟಾ ಹಿಂತೆಗೆಯಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರಗಳು ಬೀಡಿ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಜಾರಿಗೊಳಿಸುತ್ತಿದೆ. ಇದರಿಂದ ಕಾರ್ಮಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಬೀಡಿ ಮಜೂರಿಯಲ್ಲಿ 12.75 ಪೈಸೆ ಹೆಚ್ಚಿಗೆ ಮಾಡಬೇಕೆಂಬ ಆದೇಶ ಇದ್ದರೂ, ಮಾಲೀಕರಿಗೆ ಹೊರೆಯಾಗುವುದೆಂಬ ಕಾರಣದಿಂದ ಒಂದು ವರ್ಷದಿಂದ ಅದನ್ನು ಹೆಚ್ಚಿಸದೆ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ವಿಶ್ವ ಅರೋಗ್ಯ ಸಂಸ್ಥೆ ತಂಬಾಕು ಉತ್ಪನ್ನಗಳಿಗೆ ಕರೆ ನೀಡಿದ್ದರೂ, ತಂಬಾಕು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು ಒದಗಿಸಿ ನಿಷೇಧಿಸುವಂತೆ ಹೇಳಿದೆ. ಆದರೆ ಬದಲಿ ಉದ್ಯೋಗ ವ್ಯವಸ್ಥೆಯ ಪ್ರಸ್ತಾಪವನ್ನೇ ಮಾಡದೆ ಏಕಾಏಕಿ ಬೀಡಿ ನಿಷೇಧಿಸಲು ಹೊರಟಿರುವುದು ಸಮಂಜಸವಲ್ಲ. ಇತ್ತೀಚೆಗೆ ಬೀಡಿ ಕೊಂಡೊಯ್ಯುತ್ತಿದ್ದ ಗುತ್ತಿಗೆದಾರರಿಗೆ ಕೇರಳದಲ್ಲಿ ರೂ.90,000 ದಂಡ ವಿಧಿಸಿದ್ದು ಅಲ್ಲದೆ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಕಡೆಗಳಲ್ಲಿ ಬೀಡಿ ಮಾರಾಟ ಮಾಡಿದಲ್ಲಿ ರೂ.200,300 ರಂತೆ ದಂಡ ವಸೂಲಿ ಮಾಡಿ ಕಾರ್ಮಿಕರ ಊಟವನ್ನು ಕಸಿಯುತ್ತಿದ್ದಾರೆ ಎಂದು ಆರೋಪಿಸಿದರು.

ಜತೆ ಕಾರ್ಯದರ್ಶಿ ಬಾಬು ಪಿಲಾರ್ ಮಾತನಾಡಿ ಕ್ಯಾನ್ಸರ್ ರೋಗದ ಕಾರಣವನ್ನು ಮುಂದಿಟ್ಟುಕೊಂಡು ತಂಬಾಕು ಉತ್ಪನಗಳಿಗೆ ನಿಷೇಧ ಹೇರುವುದು ತಪ್ಪು. ತಂಬಾಕು ಸೇವಿಸದವರೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಇಂತಹ ಬಡ ವರ್ಗದವರಿಗೆ ಶೋಷಿಸುವಂತೆ ನೀತಿಯನ್ನು ಜಾರಿಗೆ ತರುವುದು ಸರಿಯಲ್ಲ ಎಂದರು.

ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ನಿನ ಅಧ್ಯಕ್ಷೆ ಪದ್ಮಾವತಿ.ಯಸ್ .ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಕಾರ್ಯದರ್ಶಿ ಯು. ಜಯಂತ್ ನಾೈಕ್ , ಉಪಾಧ್ಯಕ್ಷ ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ನಾರಾಯಣ ತಲಪಾಡಿ, ಪುಷ್ಪಾ ಪಿಲಾರ್ , ಮೀನಾಕ್ಷಿ ಕುತ್ತಾರು, ಸೋಮೇಶ್ವರ ಪಂ.ಸದಸ್ಯೆ ನಳಿನಿ ಪಿಲಾರ್, ನಳಿನಾಕ್ಷಿ ಉಳ್ಳಾಲಬೈಲು, ಯಶೋದಾ ಕುಂಪಲ, ಕಟ್ಟಡ ಕಾರ್ಮಿಕರ ಸಂಘದ ಜತೆ ಕಾರ್ಯದರ್ಶಿ ರೋಹಿದಾಸ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.

Exit mobile version