ಉಳ್ಳಾಲ: 94ರ ಇಳಿವಯಸ್ಸಿನಲ್ಲಿಯೂ ಉತ್ಸಾಹಭರಿತ ಹಾಗೂ ಕ್ರಿಯಾಶೀಲ ಜೀವನ ನಡೆಸುತ್ತಿರುವ ಪ್ರಗತಿಪರ ಚಿಂತಕ ಕೆ.ಟಿ. ಆಳ್ವರ್ ಅವರ ಜೀವನ, ಸರಳತೆ, ಸಮಾಜಮುಖಿ ಚಿಂತನೆ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಕೆ.ಟಿ. ಆಳ್ವ ಗುರು ವಂದನಾ ಸಮಿತಿ ಕಾರ್ಯದರ್ಶಿ ಡಾ. ಎಸ್. ಇಸ್ಮಾಯಿಲ್ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಕೆ.ಟಿ. ಆಳ್ವರ್ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಷ್ಟ–ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸರಳ ಜೀವನಶೈಲಿ ಹೊಂದಿರುವ ಆಳ್ವರ್ ಅವರು, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ವಿಶಾಲ ಮನೋಭಾವ ಹೊಂದಿದ್ದಾರೆ. ತಮ್ಮ ಜೀವನಾನುಭವ ಹಾಗೂ ಮೌಲ್ಯಗಳ ಮೂಲಕ ಹಲವರಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರು ಬೆಳೆಸಿದ ಶಿಷ್ಯರು ಹಾಗೂ ಅವರಿಂದ ಪ್ರೇರಣೆ ಪಡೆದವರು ಇಂದು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದ ಸಮಾಜ ಪಡೆದಿರುವುದಕ್ಕೆ ಪ್ರತಿಯಾಗಿ ಸಮಾಜವೂ ಅವರಿಗೆ ಗೌರವ ಸಲ್ಲಿಸಬೇಕಾಗಿದೆ. ಅವರು ಬೆಳೆಸಿದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇಸ್ಮಾಯಿಲ್ ಹೇಳಿದರು.
ಸೆ.13ರಂದು ಗುರುವಂದನಾ ಕಾರ್ಯಕ್ರಮ:
ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಉಳ್ಳಾಲ ಘಟಕದ ಅಧ್ಯಕ್ಷ ಚಂದ್ರಹಾಸ ಕಣಂತೂರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೆ.ಟಿ. ಆಳ್ವ ಗುರುವಂದನಾ ಸಮಿತಿ, ಪೂಪಾಡಿಕಲ್ಲು ಇವರ ಆಶ್ರಯದಲ್ಲಿ ಸೆ.13ರಂದು ಮುಡಿಪು ಪೂಪಾಡಿಕಲ್ ನ ಪಿ.ಎಂ. ಶ್ರೀ ದ.ಕ.ಜಿ.ಪ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಟಿ. ಆಳ್ವರ್ ಅವರ ಕುರಿತು ಚಂದ್ರಹಾಸ ಕಣಂತೂರು ರಚಿಸಿರುವ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವರ್’ಕೃತಿಯ ಲೋಕಾರ್ಪಣೆ, ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯು.ಟಿ. ಖಾದರ್ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದು, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ (ರಿ.), ಕುಡ್ಲ ಇದರ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕೃತಿಯ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಶಾರದಾ ಗಣಪತಿ ವಿದ್ಯಾಕೇಂದ್ರ, ಪುಣ್ಯಕೋಟಿ ಸಂಚಾಲಕ ಟಿ.ಜಿ. ರಾಜಾರಾಮ ಭಟ್, ಶ್ರೀಕ್ಷೇತ್ರ ಕಣಂತೂರು ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ದೈವನರ್ತಕ ಲಕ್ಷ್ಮಣ ಯಾನೆ ಕಾಂತ ಕಣಂತೂರು, ಗೈಡ್ಸ್ ಹಾಗೂ ಸ್ಕೌಟ್ಸ್, ಮುಡಿಪು ವಲಯದ ರಮೇಶ್ ಶೇಣವ ಚಕ್ರಕೋಡಿ, ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ, ಜನಜೀವನ ಬಾಳೆಪುಣಿ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ಪೂಪಾಡಿಕಲ್ಲು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮೀ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ನಾದಮಣಿ ನಾಲ್ಕೂರು ಅವರಿಂದ ಪದ, ರಂಗೀತ್ ಹಾಗೂ ತುಳು ಗೀತ ಗಾಯನ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಮುಖ್ಯ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ. ಆಳ್ವ ಗುರು ವಂದನಾ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ಹಾಗೂ ಸಂಯೋಜಕ ಪುಂಡರೀಕಾಕ್ಷ ಕುಲಾಲ್ ಉಪಸ್ಥಿತರಿದ್ದರು