ಕೊಣಾಜೆ: ಹಿರಿಯರ ಎಲ್ಲ ಆಚರಣೆಗಳೂ ಮೂಢನಂಬಿಕೆಗಳಲ್ಲ. ಆಟಿ ಅಮವಾಸ್ಯೆಯಂದು ಸೇವಿಸುವ ಪಾಲೆ ಕೆತ್ತೆ ಕಷಾಯವು ಸುಮಾರು 1000 ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸಾಬೀತಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಹೇಳಿದರು.
ಮುಡಿಪು ಶ್ರೀ ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಭಾರತೀ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ ‘ಆಟಿದ ನೆಂಪು’ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಆಟಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಋಷಿ ಸದೃಶ ಜೀವನ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದು, ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಗೌರವ ತಂದವರು. ಶಿಕ್ಷಕರು ಸಮಾಜಕ್ಕೆ ಸಂಸ್ಕಾರವಂತ ವ್ಯಕ್ತಿಗಳನ್ನು ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಬಿ. ಮಾತನಾಡಿ, ಶಿಕ್ಷಣ ಎಂದರೆ ಶಿಕ್ಷೆ ನೀಡುವುದಲ್ಲ; ಮಕ್ಕಳಿಗೆ ಗೌರವಯುತವಾಗಿ ಕಲಿಸುವುದಾಗಿದೆ. ಮಕ್ಕಳಲ್ಲಿ ಸಚ್ಚಾರಿತ್ರ್ಯ ಬೆಳೆಸುವಲ್ಲಿ ಹೆತ್ತವರ ಜವಾಬ್ದಾರಿಯೂ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಪ್‌ಕಾಮ್ಸ್ ಅಧ್ಯಕ್ಷ ಹಾಗೂ ಉದ್ಯಮಿ ಪ್ರಶಾಂತ್ ಗಟ್ಟಿ ಅಮ್ಮೆಂಬಳ ಮಾತನಾಡಿ, ಹಿಂದಿನ ದಿನಗಳಲ್ಲಿ ತುಳುನಾಡಿನಲ್ಲಿ ಪತ್ತನಾಜೆಯಿಂದಲೇ ಆಟಿಯ ಸಿದ್ಧತೆ ಆರಂಭವಾಗುತ್ತಿತ್ತು. ಹಿಂದಿನ ಆಟಿ ತಿಂಗಳ ರಭಸದ ಮಳೆ ಈಗ ಕಡಿಮೆಯಾಗಿದೆ ಎಂದು ನೆನಪಿಸಿಕೊಂಡರು.
ಉದ್ಯಮಿ ಸುಜಿತ್ ಶೆಟ್ಟಿ ಕಂಬಳಪದವು ಮುಖ್ಯ ಅತಿಥಿಯಾಗಿದ್ದರು. ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್‌ನ ಸಂಚಾಲಕ ಕೆ. ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶಂಕರನಾರಾಯಣ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ನಿವೃತ್ತ ಶಿಕ್ಷಕರಾದ ಎಂ. ರಾಮರಾವ್, ಜಿ. ಶಶಿಕಲಾ ಹಾಗೂ ರಾಮಕೃಷ್ಣ ಭಟ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಎಂ.ಕೆ. ಲೀಲಾ ಅವರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಹಾಗೂ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್. ಅವರನ್ನು ಸನ್ಮಾನಿಸಲಾಯಿತು. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ-ಶಿಕ್ಷಕಿಯರನ್ನೂ ಗೌರವಿಸಲಾಯಿತು.
ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಜಯಂತಿ ಶೇಟ್ ಪ್ರಾರ್ಥಿಸಿದರು. ನರಸಿಂಹ ಭಟ್ ವಂದಿಸಿದರು. ಹಿರಿಯ ಶಿಕ್ಷಕ ಹರೀಶ್ ಕುಮಾರ್ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಪ್ರಮುಖರಾದ ಮನು ವೆಂಕಟೇಶ್, ನ್ಯಾಯವಾದಿ ಮೊಹಮ್ಮದ್ ಅಸ್ಗರ್, ಅಬೂಬಕ್ಕರ್ ಹೂಹಾಕುವ ಕಲ್ಲು, ಪೂವಪ್ಪ, ಮುಖ್ಯ ಶಿಕ್ಷಕರಾದ ಶಕುಂತಳಾ ಶೆಟ್ಟಿ, ಶ್ವೇತಾ ಬಲ್ಲಾಳ್ ಮತ್ತಿತರರು ಸಹಕರಿಸಿದರು.
ಕಾರ್ಯಕ್ರಮದ ಬಳಿಕ ಆಟಿ ತಿಂಗಳ ಸಾಂಪ್ರದಾಯಿಕ ಆಹಾರಗಳನ್ನು ಮಧ್ಯಾಹ್ನದ ಸಹಭೋಜನದಲ್ಲಿ ವಿತರಿಸಲಾಯಿತು.