Site icon Ullalavani

ನಿತ್ಯಾಧಾರ್ ನಗರದಲ್ಲಿ ಮೊಂತಿ ಫೆಸ್ಟ್ ಆಚರಣೆ

ದೇರಳಕಟ್ಟೆ: ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನದ ಅಂಗವಾಗಿ ಸೆ. 8ರಂದು ಕೆಥೋಲಿಕರು ‘ಮೊಂತಿ ಫೆಸ್ಟ್’ ಅನ್ನು ಭಕ್ತಿಭಾವದಿಂದ ಆಚರಿಸಿದರು. ಹೊಸ ಬೆಳೆಯಿಗಾಗಿ ಕರ್ತನಿಗೆ ಕೃತಜ್ಞತೆ ಸಲ್ಲಿಸುವ ‘ತೆನೆ ಹಬ್ಬ’ವಾಗಿಯೂ ದಿನವನ್ನು ಸಂಭ್ರಮಿಸಲಾಯಿತು.

ನಿತ್ಯಾಧಾರ್ ನಗರದ ನಿತ್ಯ ಸಹಾಯ ಮಾತೆಯ ದೇವಾಲಯದಲ್ಲಿ ರೇವ್. ಡಾ. ರೋನಾಲ್ಡ್ ಸೇರಾವೊ ಅವರು ಬೆಳಗ್ಗೆ ಹಬ್ಬದ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಮಾತೆ ಮೇರಿಗೆ ಹೂ ಅರ್ಪಣೆ ಹಾಗೂ ಪ್ರಾರ್ಥನೆಗಳು ನಡೆದವು.

ನವದಿನಗಳ ನೊವೆನಾ ಬಳಿಕ ಹಬ್ಬದಂದು ಮಕ್ಕಳು ಬಾಲ ಮಾತೆಗೆ ಹೂಗಳನ್ನು ಅರ್ಪಿಸಿದರು. ತೆನೆ ಆಶೀರ್ವಚನ ನೆರವೇರಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಲಿಪೂಜೆಯ ಬಳಿಕ ಭಕ್ತರಿಗೆ ತೆನೆ ಹಂಚಲಾಯಿತು. ಸಿಹಿತಿಂಡಿ ಹಾಗೂ ಕಬ್ಬು ವಿತರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ಡಿ’ಸೋಜ, ಕಾರ್ಯದರ್ಶಿ ಜೋಯ್ಸ್ ಮರಿಯಾ ಕುವೆಲ್ಲೋ, ಆಯೋಗ ಸಂಚಾಲಕಿ ಅನಿತಾ ಲಸ್ರಾದೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version