ಪುತ್ತೂರು, ಸೆ. 02 : ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಜನರಿಗೆ ಪರಿಹಾರದ ಭರವಸೆಯ ಜೊತೆಗೆ ಮಧ್ಯಾಹ್ನದ ಊಟವನ್ನೂ ಒದಗಿಸುವ ಮೂಲಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗಮನ ಸೆಳೆದಿದ್ದಾರೆ. ಶಾಸಕರ ಕಚೇರಿಗೆ ಅಹವಾಲುಗಳೊಂದಿಗೆ ಆಗಮಿಸುವ ಸಾರ್ವಜನಿಕರಿಗಾಗಿ ಈ ವಾರದಿಂದ ವಿಶೇಷವಾಗಿ ‘ಗಂಜಿ ಊಟ’ದ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ತಮ್ಮ ಸಮಸ್ಯೆಗಳನ್ನು ಹೊತ್ತು ಆಗಮಿಸುತ್ತಾರೆ.
ಬೆಳಗ್ಗೆಯಿಂದಲೇ ಕಚೇರಿಯಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ವಿವಿಧ ಧರ್ಮ ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದ ಜನರು ತಮ್ಮ ಅಹವಾಲುಗಳನ್ನು ಶಾಸಕರ ಮುಂದೆ ಮಂಡಿಸುತ್ತಾರೆ. ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ಅವರು ಸಾರ್ವಜನಿಕರನ್ನು ಖುದ್ದಾಗಿ ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತಾರೆ.ಬೆಳಗ್ಗೆಯಿಂದ ಕಚೇರಿಗೆ ಆಗಮಿಸಿ ಸರತಿಯಲ್ಲಿ ಕಾಯುವ ಸಂದರ್ಭದಲ್ಲಿ ಕೆಲವರು ಮಧ್ಯಾಹ್ನದ ಊಟವನ್ನೂ ಮಾಡಲಾಗದೆ ಸಂಕಷ್ಟಪಡುತ್ತಿರುವುದನ್ನು ಗಮನಿಸಿದ ಶಾಸಕರು, ಸಾರ್ವಜನಿಕರ ಅನುಕೂಲಕ್ಕಾಗಿ ಊಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಇದೀಗ ಪ್ರತಿ ಸೋಮವಾರ ಶಾಸಕರ ಕಚೇರಿಗೆ ಬರುವ ಸಾರ್ವಜನಿಕರಿಗೆ ಮಧ್ಯಾಹ್ನ ಗಂಜಿ ಊಟ ನೀಡಲಾಗುತ್ತಿದೆ. ಬಡವರು, ವೃದ್ಧರು ಸೇರಿದಂತೆ ದೂರದ ಪ್ರದೇಶಗಳಿಂದ ಆಗಮಿಸುವವರಿಗೆ ಇದು ಹೆಚ್ಚಿನ ಅನುಕೂಲವಾಗಿದೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮಕ್ಕೆ ಇದೀಗ ಊಟದ ವ್ಯವಸ್ಥೆಯೂ ಸೇರ್ಪಡೆಯಾಗಿದೆ.ಜನರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ, ಗಂಟೆಗಟ್ಟಲೆ ಕಾಯುವವರಿಗೆ ಊಟದ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜನಪ್ರತಿನಿಧಿಯ ಕಚೇರಿಯಲ್ಲಿ ಸಾರ್ವಜನಿಕರ ಮೂಲಭೂತ ಅಗತ್ಯದ ಬಗ್ಗೆಯೂ ಕಾಳಜಿ ವಹಿಸಿರುವುದು ಗಮನ ಸೆಳೆದಿದೆ. ಜನಸ್ಪಂದನಾ ಕಾರ್ಯಕ್ರಮದ ವೇಳೆ ಪ್ರತೀ ಸೋಮವಾರ ನೂರಾರು ಮಂದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಈ ಊಟದ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಶಾಸಕರ ಈ ಕ್ರಮ ಇದೀಗ ಪುತ್ತೂರಿನಾಚೆಗೂ ಚರ್ಚೆಗೆ ಕಾರಣವಾಗಿದ್ದು, ಜನರ ಸಮಸ್ಯೆ ಆಲಿಸುವುದರ ಜೊತೆಗೆ ಅವರ ಹಸಿವಿನ ಬಗ್ಗೆಯೂ ಕಾಳಜಿ ವಹಿಸಿರುವ ನಡೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ.