ಮಂಗಳೂರು: ಸುಲ್ತಾನುಲ್ ಉಲಮಾ ಎ.ಪಿ. ಕಾಂತಪುರಂ ಉಸ್ತಾದರ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರನ್ನು ಹಾಗೂ ಇಸ್ಲಾಂ ಧರ್ಮವನ್ನು ಮಹಿಳಾ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಡ್ಕರೆ ಫೌಂಡೇಶನ್ ಸ್ಥಾಪಕ ಎಂ. ಸಿರಾಜ್ ಅಡ್ಕರೆ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸುಲ್ತಾನುಲ್ ಉಲಮಾ ಎ.ಪಿ. ಕಾಂತಪುರಂ ಉಸ್ತಾದರು ನೀಡಿರುವ ಹೇಳಿಕೆ ಇಸ್ಲಾಂ ಧರ್ಮದ ಧಾರ್ಮಿಕ ಚೌಕಟ್ಟಿಗೆ ಸಂಬಂಧಿಸಿದ ವಿಚಾರವಾಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಂಡು ಅನಗತ್ಯ ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಉಸ್ತಾದರು ತಮ್ಮ ಸಂಸ್ಥೆಗಳ ಮೂಲಕ ಲಕ್ಷಾಂತರ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿದ್ದು, ಅವರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ನೆರವಾಗಿದ್ದಾರೆ. ಅಲ್ಲದೆ, ಸಾವಿರಾರು ಮಹಿಳೆಯರಿಗೆ ತಮ್ಮ ಸಂಸ್ಥೆಗಳಲ್ಲಿ ಗೌರವಯುತ ಉದ್ಯೋಗದ ಅವಕಾಶಗಳನ್ನು ಒದಗಿಸಿದ್ದಾರೆ ಎಂದು ಸಿರಾಜ್ ಅಡ್ಕರೆ ತಿಳಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ನಡೆದಾಗಲೆಲ್ಲ ನ್ಯಾಯದ ಪರವಾಗಿ ಹಾಗೂ ಮಹಿಳೆಯರ ಪರವಾಗಿ ಅವರು ಧ್ವನಿ ಎತ್ತಿದ್ದಾರೆ. ಇಂತಹ ಅಗ್ರಮಾನ್ಯ ವ್ಯಕ್ತಿತ್ವದ ವಿರುದ್ಧ ಕೇವಲ ರೀಲ್ಸ್ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕಿ ಸುರಯ್ಯ ಅಂಜುಮ್ ಸೇರಿದಂತೆ ಮಹಿಳಾ ಪರ ಎಂದು ಹೇಳಿಕೊಳ್ಳುವವರು ಯಾವುದೇ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ವಾಸ್ತವಾಂಶಗಳನ್ನು ಅರಿತು ಮಾತನಾಡಬೇಕು. ಇಲ್ಲವಾದಲ್ಲಿ ಅಂತಹ ನಕಲಿ ಮಹಿಳಾಪರ ವ್ಯಕ್ತಿತ್ವಗಳ ವಿರುದ್ಧ ಜನರು ಪ್ರಶ್ನೆ ಮಾಡುವಂತಾಗುತ್ತದೆ ಎಂದು ಎಂ. ಸಿರಾಜ್ ಅಡ್ಕರೆ ಎಚ್ಚರಿಸಿದ್ದಾರೆ.