ಕುತ್ತಾರು: ಸೌಹಾರ್ದತೆಗೆ ಹೆಸರಾಗಿರುವ ಉಳ್ಳಾಲ ಕ್ಷೇತ್ರದಲ್ಲಿ ಧರ್ಮ, ಜಾತಿ, ರಾಜಕೀಯದ ಎಲ್ಲೆಗಳನ್ನು ಮೀರಿ ಸೌಹಾರ್ದತೆಯ ಸಂದೇಶ ಸಾರುವ ಮತ್ತೊಂದು ಪ್ರಯತ್ನ ನಡೆದಿದೆ. ಕುತ್ತಾರು ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೌಹಾರ್ದ ವೃತ್ತವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಿದರು.
ಸಚಿವ ಯು.ಟಿ. ಖಾದರ್ ಅವರು ರಾಜಕೀಯಕ್ಕೂ ಮೀರಿದ ಸೌಹಾರ್ದತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ, ಮಠ, ಮಂದಿರ, ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡುವ ಮೂಲಕ ವಿವಿಧ ಧರ್ಮಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳು ಕೂಡ ಸೌಹಾರ್ದತೆಯ ಸಂದೇಶವನ್ನು ಸಾರುತ್ತಿವೆ. ಇದೀಗ ಕುತ್ತಾರು ಜಂಕ್ಷನ್‌ನಲ್ಲಿ ಸೌಹಾರ್ದದ ಹೆಸರಿನಲ್ಲಿ ವೃತ್ತ ನಿರ್ಮಿಸುವ ಮೂಲಕ ಮತ್ತೊಮ್ಮೆ ಇದಕ್ಕೆ ಉದಾಹರಣೆಯಾಗಿದ್ದಾರೆ.
ನೂತನ ಸೌಹಾರ್ದ ವೃತ್ತದ ಮುಕುಟದಲ್ಲಿ ಕೊರಗಜ್ಜನ ಮುಟ್ಟಾಲೆ ಹಾಗೂ ದಂಟೆಯ ಹೊಳಪಿನ ಪ್ರತಿಕೃತಿಯನ್ನು ಅಳವಡಿಸಲಾಗಿದೆ. ಅಲ್ಲದೆ, ವೃತ್ತದಲ್ಲಿ ಕೊರಗಜ್ಜನ ಆದಿಕ್ಷೇತ್ರ, ರಾಣಿಪುರ ಚರ್ಚ್ ಹಾಗೂ ಕುಂಡೂರು ಜುಮಾ ಮಸೀದಿಗೆ ತೆರಳುವ ಮಾರ್ಗಗಳ ಮಾರ್ಗಸೂಚಿ ಫಲಕವನ್ನೂ ಅಳವಡಿಸಲಾಗಿದೆ.
ಸೌಹಾರ್ದ ವೃತ್ತವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ, ಅದು ಈ ಮಣ್ಣಿನ ಶಕ್ತಿ ಎಂದು ಹೇಳಿದರು.
ಎಲ್ಲಾ ಧರ್ಮಗಳ ಸಂದೇಶವೂ ಇನ್ನೊಬ್ಬರ ದೇಹದ ಗಾಯ ಹಾಗೂ ಮನಸ್ಸಿನ ನೋವನ್ನು ಗುಣಪಡಿಸುವ ಔಷಧಿಯಂತಿದೆ. ಈ ವೃತ್ತದ ಅನಾವರಣದ ಮೂಲಕ ಇಡೀ ದೇಶಕ್ಕೆ ಕುತ್ತಾರಿನಿಂದಲೇ ಸೌಹಾರ್ದದ ಸಂದೇಶ ರವಾನೆಯಾಗಬೇಕು ಎಂದರು.ಅಭಿವೃದ್ಧಿಯ ಪರ್ವ ಇಲ್ಲಿಗೆ ನಿಲ್ಲುವುದಿಲ್ಲ. ಕುತ್ತಾರಿನಿಂದ ಅಂಬ್ಲಮೊಗರು ರಸ್ತೆ ಅಗಲೀಕರಣಕ್ಕೆ ನಾಳೆಯೇ ಚಾಲನೆ ನೀಡಲಾಗುವುದು. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಮೂರು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಕುತ್ತಾರು ಪ್ರದೇಶವು ಸೌಹಾರ್ದತೆ ಮತ್ತು ಸೋದರತ್ವದ ಪ್ರದೇಶವಾಗಿ ನಿರ್ಮಾಣಗೊಳ್ಳಲಿದೆ. ಉಳ್ಳಾಲಕ್ಕೆ ಶೇಕಡ 20ಕ್ಕೂ ಅಧಿಕ ಪ್ರವಾಸಿಗರು ಆಗಮಿಸಲು ಕೊರಗಜ್ಜನ ಕ್ಷೇತ್ರವೂ ಪ್ರಮುಖ ಕಾರಣವಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.
ಕಾರ್ಯಕ್ರಮದಲ್ಲಿ ಕುತ್ತಾರು ಪಂಜAದಾಯ, ಬಂಟ, ವೈದ್ಯನಾಥ, ಆದಿ ಕೊರಗತನಿಯ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಬಿ. ಶ್ರೀಧರ ಶೆಟ್ಟಿ ಮಾಗಣತ್ತಡಿ, ಪಂಜAದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ಎಂ. ಮಹಾಬಲ ಹೆಗ್ಡೆ ದೆಬ್ಬೇಲಿ, ಪ್ರಮುಖರಾದ ರತ್ನಾಕರ ಕಾವ ಕುತ್ತಾರ್ ಗುತ್ತು, ರಾಜಣ್ಣ ಬೋಳ್ಯಗುತ್ತು, ಪದ್ಮನಾಭ ಶೆಟ್ಟಿ ಗೇಣಿಮನೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಣಚೂರು ಮೋನು, ಮದನಿನಗರ ಜುಮಾ ಮಸೀದಿ ಅಧ್ಯಕ್ಷರಾದ ಅಝೀಝ್, ರಾಣಿಪುರ ಚರ್ಚ್ನ ಧರ್ಮಗುರು ಎರಿಕ್ ಕ್ರಾಸ್ತಾ, ಕುತ್ತಾರು ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಪವಿತ್ರಗಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.