ಕೊಣಾಜೆ: ಮುಲಾರ ಪೂರ್ಣಗಿರಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಆ.12ರಿಂದ ಸೆ.4ರವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆಯುತ್ತಿರುವ 24 ದಿನಗಳ ಸಂಧ್ಯಾ ಭಜನಾ ಕಾರ್ಯಕ್ರಮ ಭಕ್ತಿಭಾವದಿಂದ ಸಾಗುತ್ತಿದೆ.
ಭಜನಾ ಕಾರ್ಯಕ್ರಮದ 15ನೇ ದಿನವಾದ ಆ.26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮ ತಂಡದೊಂದಿಗೆ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಭೇಟಿ ನೀಡಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಭಕ್ತರು ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂದಿರ ಹಾಗೂ ಮಾತೃ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಂದಿರದ ಹಿರಿಯರು, ಕಿರಿಯರು, ಭಜನಾ ತಂಡದ ಸದಸ್ಯರು ಹಾಗೂ ಭಕ್ತ ಮಿತ್ರರು ಉಪಸ್ಥಿತರಿದ್ದರು.
ಸನಾತನ ಸಂಸ್ಕೃತಿ, ಭಜನಾ ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳ ಸಂರಕ್ಷಣೆ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಂಸದರು ಹೇಳಿದರು.