Site icon Ullalavani

ರಾಯರ ತತ್ತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ: ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು

ಮಂಜೇಶ್ವರ: “ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ತತ್ತ್ವಗಳು ಹಾಗೂ ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಜಾತಿ, ಮತ ಭೇದವಿಲ್ಲದೆ ಇಡೀ ಮಾನವಕುಲವನ್ನು ಹರಸುವ ಜಗದ್ಗುರುಗಳಾಗಿ ರಾಯರು ಗುರುತಿಸಿಕೊಂಡಿದ್ದಾರೆ. ಅವರ ಆದರ್ಶಗಳು ಮತ್ತು ಕೃತಿಗಳು ಸಮಾಜಕ್ಕೆ ಸದಾ ದಾರಿದೀಪವಾಗಿವೆ” ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಹೇಳಿದರು.

ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದಲ್ಲಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡಿದರು.

ಆರಾಧನಾ ಮಹೋತ್ಸವದ ಅಂಗವಾಗಿ ಪ್ರಧಾನ ಋತ್ವಿಜ್ ಶ್ರೀ ಯಾದವ ಶರ್ಮಾ ನೀರ್ಚಾಲ್ ಅವರ ಪೌರೋಹಿತ್ಯದಲ್ಲಿ ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ನಂತರ ನಡೆದ ಸರಳ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದೆ, ಕನ್ನಡ–ತುಳು ಚಲನಚಿತ್ರ ನಟಿ ಹಾಗೂ ನ್ಯಾಷನಲ್ ಫಿಲ್ಮ್ ಅವಾರ್ಡ್ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಹಾಗೂ ರಾಯರ ಪರಮ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು–ಕನ್ನಡ ಚಲನಚಿತ್ರ ನಟ ಹಾಗೂ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರನ್ನು ಗೌರವಿಸಲಾಯಿತು.

ಮಕ್ಕಳ ಕಲಿಕೆ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ “ಓಂ ಶ್ರೀ ರಾಘವೇಂದ್ರಾಯ ನಮಃ” ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೀಯಪದವು ಕೊಡಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್‌ಗಳನ್ನೂ ವಿತರಿಸಲಾಯಿತು.

ಶಶಿಧರ ಶೆಟ್ಟಿ ಜಮ್ಮದಮನೆ, ಅಶ್ವಿನಿ ಎಂ.ಎಲ್., ಸುಂದರಿ ಆರ್. ಶೆಟ್ಟಿ, ಕಮಲಾಕ್ಷಿ ಕೆ. ಪಾವೂರು, ಹೈಮೇಶ್ ಬಿ.ಎಂ., ಯಾದವ ಬಡಾಜೆ, ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಉದಯ ಪಾವಳ, ಸುದರ್ಶನ ಕುಮಾರ್ ಜೈನ್, ತುಳಸಿದಾಸ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.

ರಾಯರ ಭಕ್ತರು ಮಂಜೇಶ್ವರದ ಸಂಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು. ಸಂಸ್ಥಾಪಕರಾದ ರಾಜೇಶ್ ಕಡಂಬಾರು ವಂದಿಸಿದರು. ಬಳಿಕ ಭಕ್ತರಿಗೆ ಲಘು ಉಪಹಾರ ವಿತರಿಸಲಾಯಿತು.

Exit mobile version