ಉಳ್ಳಾಲ: ವೀನಸ್ ಎಂಟರ್ ಟೈನರ್ ಬ್ಯಾನರ್ ಅಡಿಯಲ್ಲಿ “ಸಲಗ” ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ಹಾಗೂ ವೆಂಕಟಾಚಲ (ಚಲಂ) ನಿರ್ದೇಶನದಲ್ಲಿ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಚಿತ್ರೀಕರಣಗೊಳ್ಳುತ್ತಿರುವ ಕನ್ನಡ-ತೆಲುಗು ದ್ವಿಭಾಷಾ ಆ್ಯಕ್ಷನ್ ಹಾಸ್ಯಚಿತ್ರ ‘ಹಲ್ಕಾ ಡಾನ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ ಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದಿತು. ಬಳಿಕ ಅಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು.
ಚಿತ್ರದಲ್ಲಿ ಪ್ರಮೋದ್ ಪಂಜು, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಅರವಿಂದ್ ಬೋಳಾರ್ ಸೇರಿದಂತೆ ಸಾಯಿ ಕುಮಾರ್, ಜ್ಯೋತಿ ಪೂರ್ವಜ್ ಹಾಗೂ ರಮೇಶ್ ಇಂದಿರಾ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ನಾಯಕ ನಟ ಪ್ರಮೋದ್ ಪಂಜು ಮಾತನಾಡಿ, ಮಂಗಳೂರಿನಲ್ಲಿ ನಡೆಯುವ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು. ಚಿತ್ರದಲ್ಲಿ ಅನುಭವಿ ಕಲಾವಿದರಾದ ಅರವಿಂದ್ ಬೋಳಾರ್ ಹಾಗೂ ರೂಪೇಶ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುತ್ತಿರುವುದು ಉತ್ತಮ ಅನುಭವ ನೀಡಿದೆ ಎಂದು ಹೇಳಿದರು. ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನರಿಗೆ ತಮ್ಮದೇ ಭಾಷೆಯಲ್ಲಿ ಚಿತ್ರವನ್ನು ತಲುಪಿಸುವ ಉದ್ದೇಶದಿಂದ ತುಳು ಭಾಷೆಯಲ್ಲೂ ಚಿತ್ರವನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ನಟ ರೂಪೇಶ್ ಶೆಟ್ಟಿ ಮಾತನಾಡಿ, ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದರೂ ಉತ್ತಮ ಬ್ಯಾನರ್‌ನೊಂದಿಗೆ ಕೆಲಸ ಮಾಡಬೇಕು ಎಂಬ ಆಸೆಯಿತ್ತು. ಇದೀಗ ‘ಹಲ್ಕಾ ಡಾನ್’ ಮೂಲಕ ಆ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.
“ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಕಥೆ ಹೇಳಿದಾಗಲೇ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ನಿರ್ದೇಶಕ ಚಲಂ ಅವರೊಂದಿಗೆ ಮೊದಲ ಭೇಟಿಯಲ್ಲೇ ಸಾಕಷ್ಟು ನಕ್ಕಿದ್ದೆ. ‘ಹಲ್ಕಾ ಡಾನ್’ ಎಂಬ ಶೀರ್ಷಿಕೆಯೇ ಕುತೂಹಲ ಮೂಡಿಸುತ್ತದೆ. ಮಂಗಳೂರಿನ ಡಾನ್ ಒಬ್ಬನ ಕಥೆಯನ್ನು ವಿಭಿನ್ನ ಹಾಗೂ ಹಾಸ್ಯಮಯವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದ ಪ್ರಚಾರವನ್ನೂ ವಿಭಿನ್ನ ರೀತಿಯಲ್ಲಿ ನಡೆಸುವ ಆಲೋಚನೆ ಇದೆ,” ಎಂದು ಹೇಳಿದರು.
ನಿರ್ದೇಶಕ ವೆಂಕಟಾಚಲ (ಚಲಂ) ಮಾತನಾಡಿ, ‘ಹಲ್ಕಾ ಡಾನ್’ ಒಬ್ಬ ಆಕರ್ಷಕ ಆದರೆ ಮುಗ್ಧ ಸ್ವಭಾವದ ವ್ಯಕ್ತಿ ಅನಿರೀಕ್ಷಿತವಾಗಿ ಪ್ರಬಲ ಗ್ಯಾಂಗ್‌ನ ಮುಖವಾಗುವ ಕಥೆಯನ್ನು ಒಳಗೊಂಡಿದೆ. ಬಳಿಕ ಸ್ಥಳೀಯ ಭೂಗತ ಲೋಕದ ಪೈಪೋಟಿಯಲ್ಲಿ ಸಿಲುಕಿಕೊಳ್ಳುವ ನಾಯಕ, ತನ್ನ ಬುದ್ಧಿವಂತಿಕೆ, ಅನಿರೀಕ್ಷಿತ ಮೈತ್ರಿಗಳು ಹಾಗೂ ಅಮೃತಾ ಅವರ ಪಾತ್ರದ ನೆರವಿನಿಂದ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಹಾಸ್ಯ ಹಾಗೂ ಆಕ್ಷನ್‌ನೊಂದಿಗೆ ಚಿತ್ರಿಸಲಾಗಿದೆ ಎಂದರು.“ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಇಷ್ಟು ದೊಡ್ಡ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ನಿರ್ಮಾಪಕರು ಹಾಗೂ ಇಡೀ ಚಿತ್ರತಂಡಕ್ಕೆ ನಾನು ಕೃತಜ್ಞ,” ಎಂದು ಚಲಂ ಹೇಳಿದರು.
ಈಗಾಗಲೇ ಕನ್ನಡದಲ್ಲಿ ಮೈಲಾರಿ, ಟಗರು, ಸಲಗ, U I, ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿ, ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಿಸುವ ಉದ್ದೇಶವಿತ್ತು. ಆದರೆ ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿರುವುದರಿಂದ ಇಲ್ಲಿನ ಜನರ ಭಾಷೆಯಾದ ತುಳುವಿನಲ್ಲೂ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಆಶಯ ಮೂಡಿತು. ಈ ಹಿನ್ನೆಲೆಯಲ್ಲಿ ತುಳು ಭಾಷೆಯಲ್ಲೂ ಚಿತ್ರವನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
“ಕುತ್ತಾರು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇವೆ. ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಚಿತ್ರವನ್ನು ಇಲ್ಲಿನ ಜನರ ಭಾಷೆಯಾದ ತುಳುವಿನಲ್ಲಿ ನೀಡಬೇಕು ಎಂಬುದು ನಮ್ಮ ಆಶಯ. ಮಂಗಳೂರಿನಲ್ಲಿ ಚಿತ್ರ ಯಶಸ್ವಿಯಾದರೆ ಇಡೀ ಕರ್ನಾಟಕದಲ್ಲೇ ಯಶಸ್ವಿಯಾದಂತೆ ಎಂಬ ನಂಬಿಕೆ ನಮ್ಮದು. ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಕರು ಉತ್ತಮ ಸಿನಿಮಾಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿತ್ರಕ್ಕೆ ಪರಶುರಾಮನ ಆಶೀರ್ವಾದ ಸದಾ ಇರಲಿ ಎಂಬುದು ನಮ್ಮ ಆಶಯ,” ಎಂದು ಕೆ ಪಿ ಶ್ರೀಕಾಂತ್ ಹೇಳಿದರು.
ಹಾಸ್ಯ ನಟ ಅರವಿಂದ್ ಬೋಳಾರ್ ಮಾತನಾಡಿ, ಕೆ.ಪಿ. ಶ್ರೀಕಾಂತ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಹಯೋಗದಲ್ಲಿ ಉತ್ತಮ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಚಿತ್ರತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ತಮಗೆ ನಾಯಕಿಯ ಪಾತ್ರ ಸಿಕ್ಕಿಲ್ಲ ಎಂದು ಹಾಸ್ಯವಾಗಿ ಹೇಳಿದ ಬೋಳಾರ್, ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಾಯಕ ಇಂದು ದೊಡ್ಡ ನಾಯಕನಾಗಿ ಬೆಳೆದಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಚಿತ್ರದ ಸೆಟ್‌ನ ವಾತಾವರಣ ತುಂಬಾ ಉತ್ತಮವಾಗಿದೆ. ಒಳ್ಳೆಯ ತಂಡದೊಂದಿಗೆ ಉತ್ತಮ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸಂತೋಷವಿದೆ. ‘ಹಲ್ಕಾ ಡಾನ್’ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ಸುಜಯ್ ಶಾಸ್ತ್ರಿ, ಮೆನೇಜರ್ ಸುಧೀರ್, ನಿರ್ದೇಶಕ ಛಲಂ, ನಿರ್ಮಾಪಕ ಕೆ.ಪಿ ಶ್ರೀಕಾಂತ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಕ್ಯಾಮರಾಮೆನ್ ಸತ್ಯ ಹೆಗಡೆ, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟೀ ಮಹಾಬಲ ಹೆಗ್ಡೆ ದೆಪ್ಪೆಲಿಮಾರ್, ನಟ ರೂಪೇಶ್ ಶೆಟ್ಟಿ, ಗೌತಮ್ ಮಂಗಳೂರು ಉಪಸ್ಥಿತರಿದ್ದರು.