ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಿಂದ ಜನಸಾಮಾನ್ಯರಿಗೆ ಉಪಯುಕ್ತವಾಗುವ ಹಾಗೂ ಸಮಾಜಕ್ಕೆ ಅರ್ಥಪೂರ್ಣವಾಗುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ. ರೈತರು ದೇಶಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದ್ದು, ಬಡವರು ಹಾಗೂ ಕೃಷಿಗೆ ವಿಶೇಷ ಮಹತ್ವ ನೀಡಬೇಕಾಗಿದೆ. ಇಂದಿನ ಯುವಜನಾಂಗಕ್ಕೆ ಕೃಷಿಯ ಮಹತ್ವವನ್ನು ತಿಳಿಸಿಕೊಡುವುದು ರೈತರಿಗೆ ನೀಡುವ ದೊಡ್ಡ ಗೌರವವಾಗಿದೆ . ಅದನ್ನು ಬ್ಯಾಂಕ್ ಆಡಳಿತ ಮಂಡಳಿ ನಿರಂತರವಾಗಿ ನಡೆಸುತ್ತಾ ಬಂದಿದೆ. ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಹೇಳಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನ ವತಿಯಿಂದ ಬ್ಯಾಂಕ್ ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಭಾನುವಾರ ನಡೆದ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಂದು ಕಾಲದಲ್ಲಿ ದೇಶದಲ್ಲಿ ಆಹಾರದ ಕೊರತೆ ಎದುರಾಗಿತ್ತು. ಹಡಗುಗಳಲ್ಲಿ ಆಹಾರ ಧಾನ್ಯಗಳನ್ನು ತರಿಸಿಕೊಂಡು ಜನರಿಗೆ ವಿತರಿಸುವ ಪರಿಸ್ಥಿತಿಯೂ ಇತ್ತು. ಅಕ್ಕಿ ಸರಬರಾಜಿನಲ್ಲಿ ಸಮಸ್ಯೆ ಉಂಟಾದ ಸಂದರ್ಭಗಳಲ್ಲಿ ಜನರ ಸಂಕಷ್ಟವನ್ನು ನಿವಾರಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿತ್ತು . ತಂದೆ ಶಾಸಕರಾಗಿದ್ದ ಅವಧಿಯಲ್ಲಿ ಮನೆಮುಂದೆ ಎಡರಂಗ ಚಳವಳಿಗಳು ಅಕ್ಕಿ ಕೊಡಿ ಇಲ್ಲವಾದರೆ ರಾಜೀನಾಮೆ ಕೊಡಿ ಅನ್ನುವ ಘೋಷಣೆ ಇಂದಿಗೂ ನೆನಪಿದೆ. ಜವಾಹಾರ್ ಲಾಲ್ ನೆಹರು ರವರು ದೇಶದಲ್ಲಿ ನೀರಾವರಿ ಯೋಜನೆಗಳಿಗೆ ಉತ್ತೇಜನ ನೀಡುವ ಮೂಲಕ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು. ಹಸಿರು ಕ್ರಾಂತಿಯ ಪರಿಣಾಮ ಆಹಾರ ಉತ್ಪಾದನೆ ಹೆಚ್ಚಾಗಿತ್ತು. ಆದರೂ ಭತ್ತ ಕೃಷಿಯಲ್ಲಿ ಕೊರತೆಯಿತ್ತು. ಆದರೆ ಇಂದಿರಾ ಗಾಂಧಿ ಪ್ರಧಾನಿಯಾದ ನಂತರ ರೈತರು ದೇಶದ ಆಹಾರ ಭದ್ರತೆಗೆ ನೀಡಿರುವ ಕೊಡುಗೆಯನ್ನು ಎಂದಿಗೂ ಮರೆಯಬಾರದು. ಬಡವರಿಗೆ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯ ದೊರೆಯುವಂತೆ ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇಂತಹ ಯೋಜನೆಗಳು ಜನಸಾಮಾನ್ಯರಿಗೆ ನೆರವಾಗಿವೆ. ಅದೇ ರೀತಿ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು . ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ನಾಲಿಗೆಗೆ ರುಚಿ ನೀಡುವ ಆಹಾರಕ್ಕಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಆದ್ದರಿಂದ ರುಚಿಗಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಜೀವನದಲ್ಲಿ ಕಷ್ಟಗಳು ಎದುರಾದಾಗ ಟೆನ್ಷನ್ ಮಾಡಿಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಬೇಕು. ಒತ್ತಡವನ್ನು ಹೆಚ್ಚಿಸಿಕೊಂಡರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕಷ್ಟ ಬಂದಾಗ ಆತಂಕಪಡುವ ಬದಲು ಪರಿಹಾರದ ದಾರಿ ಹುಡುಕಬೇಕು . ಜನಪರ ಕಾರ್ಯಕ್ರಮಗಳು ಮುಂದುವರಿಯಲಿ, ರೈತರು ಹಾಗೂ ಬಡವರಿಗೆ ಹೆಚ್ಚಿನ ಗೌರವ ಮತ್ತು ನೆರವು ದೊರೆಯಲಿ ಎಂದು ಅವರು ಆಶಿಸಿದರು.
ಬ್ಯಾಂಕ್ ನ ಕಾರ್ಯವ್ಯಾಪ್ತಿಯ 14ಗ್ರಾಮದ ಪ್ರತಿಯೊಂದು ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಟ್ಟು 51ವಿದ್ಯಾರ್ಥಿಗಳಿಗೆ ಗೌರವ ಧನದ ಜೊತೆಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೆಯೇ ಒಂದು ಎಕರೆ ಹಾಗೂ ಎರಡು ಎಕರೆ ಜಮೀನು ಹೊಂದಿರುವ ಭತ್ತದ ಕೃಷಿಕರಿಗೆ ಎಕರೆಗೆ ಐದು ಸಾವಿರ ರೂ. ಗಳಂತೆ ಸಹಾಯ ಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್, ಬ್ಯಾಂಕಿನ ಉಪಾಧ್ಯಕ್ಷ ಕೆ.ಬಿ. ಅಬುಸಾಲಿ ಕಿನ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಹಾಗೂ ನಿರ್ದೇಶಕರುಗಳಾದ ಗಂಗಾಧರ್ ಯು., ಅರುಣ್ ಕುಮಾರ್ ಯು., ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಸುರೇಖಾ ಚಂದ್ರಹಾಸ್, ಸುನೀತಾ ಲೋಬೊ, ಬಾಬು ನಾಯ್ಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಅಧ್ಯಕ್ಷತೆ ವಹಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಸ್ವಾಗತಿಸಿದರು. ಸಂತೋಷ್ ಶೆಟ್ಟಿ ಮಾಡೂರು ಹಾಗೂ ಹರೀಶ್ ನೀಲಿಪಾಲು ಕಾರ್ಯಕ್ರಮ ನಿರೂಪಿಸಿದರು. ನವೀನ್ ಎಲ್. ಸಾಲ್ಯಾನ್ ವಂದಿಸಿದರು.
ಕಾರ್ಯಕ್ರಮದಲ್ಲಿ ನೂತನ ಸಚಿವರಾಗಿ ಆಯ್ಕೆಯಾದ ಯು.ಟಿ. ಖಾದರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.