ಉಳ್ಳಾಲ: ಹಿಂದುಳಿದ ಸಮಾಜವನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತಂದು, ಎಲ್ಲರಿಗೂ ಗೌರವದ ಸ್ಥಾನ ದೊರಕಿಸಿಕೊಟ್ಟ ನಾರಾಯಣ ಗುರುಗಳ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದೂ ಧರ್ಮದ ದೊಡ್ಡ ಸಮಾಜವಾಗಿರುವ ಬಿಲ್ಲವ ಸಮಾಜ ಎಲ್ಲರಿಗೂ ಮಾದರಿಯಾಗಬೇಕು ಎಂದು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಕೊಲ್ಯ–ಸೋಮೇಶ್ವರದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಎಂ. ಮಾತನಾಡಿ, ಬಿಲ್ಲವ ಮಹಾಮಂಡಲದ ಕಾರ್ಯದರ್ಶಿ ಹಾಗೂ ನಿವೃತ್ತ ಮೆಸ್ಕಾಂ ಅಧಿಕಾರಿ ದಯಾನಂದ ಎಂ. ಮಾತನಾಡಿ, ಕೇರಳದಲ್ಲಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ, ಮೂರನೇ ದಿನ ಶತಭಿಷಾ ನಕ್ಷತ್ರದಲ್ಲಿ ವಿಶ್ವಮಾನವ ನಾರಾಯಣ ಗುರುಗಳು ಜನಿಸಿದರು. ಅವರ ದೈವ ದರ್ಶನಂ ಕೃತಿಯು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಂಡಿರುವುದು ಸಂತಸದ ಸಂಗತಿ. ಈ ಕೃತಿ 137 ಭಾಷೆಗಳಿಗೆ ಅನುವಾದಗೊಂಡು ಅಧ್ಯಯನದ ವಸ್ತುವಾಗಿದೆ.
ವೃದ್ಧಾಪ್ಯದಲ್ಲಿ ತಂದೆ-ತಾಯಂದಿರು ಆಶ್ರಮವಾಸಿಗಳಾಗದಂತೆ ಮಕ್ಕಳು ಅವರನ್ನು ನೋಡಿಕೊಳ್ಳಬೇಕು. ಹೆತ್ತವರ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಗುರುಗಳ ಸಂದೇಶವನ್ನು ಪಾಲಿಸಬೇಕು. ಜೀವನದ ವಿವಿಧ ಹಂತಗಳಲ್ಲಿ ಹೆತ್ತವರನ್ನು ಸಲಹುವುದು ಮತ್ತು ಅವರ ಆರೈಕೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ .ಗುರು ಚಾರಿಟೇಬಲ್ ಟ್ರಸ್ಟ್ ಹಲವು ವರ್ಷಗಳಿಂದ ಅಶಕ್ತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾ ಬಂದಿದೆ. ಕಠಿಣ ಪರಿಸ್ಥಿತಿಯಲ್ಲಿರುವ ಮಕ್ಕಳ ಬದುಕನ್ನು ಸಮೀಕ್ಷೆಗಳ ಮೂಲಕ ಗುರುತಿಸಿ ಅವರಿಗೆ ನೆರವಾಗುವ ಕಾರ್ಯ ಮುಂದುವರಿಯಬೇಕು ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಗುರುಗಳ ಹೋರಾಟವೂ ಮಹತ್ವದ ಪಾತ್ರ ವಹಿಸಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ನಾರಾಯಣ ಗುರುಗಳ ತತ್ವಗಳು ಮಾರ್ಗದರ್ಶನ ನೀಡುತ್ತವೆ. ಗುರುಗಳು ಕೊಲ್ಯಕ್ಕೆ ಭೇಟಿ ನೀಡಿದ ಹಿನ್ನೆಲೆ ಕೊಲ್ಯ ಪವಿತ್ರ ಮಣ್ಣಿನ ಪ್ರದೇಶವಾಗಿದ್ದು, ಅವರ ಹೆಸರಿನಲ್ಲಿ ನಡೆಯುತ್ತಿರುವ ಸಮಾಜಸೇವಾ ಕಾರ್ಯಗಳು ಶ್ಲಾಘನೀಯ .ಸಾಮಾಜಿಕ ಬದುಕಿನಲ್ಲಿ ನಾರಾಯಣ ಗುರುಗಳ ಮಂದಿರ ಸ್ಥಾಪನೆಯಾಗಲು ಜನಾರ್ದನ ಪೂಜಾರಿ ಅವರ ಕೊಡುಗೆ ಮಹತ್ವದ್ದಾಗಿದೆ. ಅದ್ದೂರಿ ಮದುವೆ ಸೇರಿದಂತೆ ಅನಗತ್ಯ ಆಡಂಬರಗಳಿಗೆ ಅವರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಸರಳತೆ ಶಾಶ್ವತ, ಪ್ರಾಮಾಣಿಕತೆ ಮಾತ್ರ ಶಾಶ್ವತ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರು ಸಿ. ಎ. ಶ್ರೀವತ್ಸ ಎನ್. ಬಲ್ಲಕುರಾಯ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರು ದಿವ್ಯ ಸತೀಶ್ ಶೆಟ್ಟಿ, ಆತ್ಮಶಕ್ತಿ ಪತ್ರಿಕೆಯ ಸಹಾಯಕ ಸಂಪಾದಕರು ವಿಶ್ವನಾಥ ಪೂಜಾರಿ ರೆಂಜಾಳ , ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರು ಗೋಪಾಲ ಕೊಂಡಾಣ, ಟ್ರಸ್ಟ್ ಗೌರವಾಧ್ಯಕ್ಷರು ಈಶ್ವರ್ ಸುವರ್ಣ, ನಾರಾಯಣ ಗುರುಗಳ ಮಹಿಳಾ ಮಂಡಳಿ ಅಧ್ಯಕ್ಷೆ ತ್ರಿವೇಣಿ ಕುಂಪಲ, ಸಾಂಸ್ಕೃತಿಕ ಸಂಚಾಲಕರು ಜೀವನ್ ಕೊಲ್ಯ ಉಪಸ್ಥಿತರಿದ್ದರು.
ಕುಸುಮಾಕರ ಕುಂಪಲ, ಲತೀಶ್ ಎಂ. ಸಂಕೊಳಿಗೆ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷರು ಶೇಷಪ್ಪ ಬೈದ್ಯಮನೆ ಸ್ವಾಗತಿಸಿದರು. ಸುಂದರ್ ಸುವರ್ಣ ವಂದಿಸಿದರು.
ಇದೇ ಸಂದರ್ಭ ನಾರಾಯಣ ಗುರು ಯಕ್ಷಗಾನ ಕಲಾ ಸಂಘ ಕೊಲ್ಯ ಇವರಿಂದ ಯಕ್ಷಗಾನ ತಾಳಮದ್ದಳೆ ಬ್ರಾಣೆ ಶರ್ತ್ ಹಾಗೂ ಶ್ರೀ ಗುರು ಕುಣಿತ ಭಜನಾ ತಂಡ ಕೊಲ್ಯ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವ್ಯವಹಾರಿಕ ಪ್ರಬಂಧ ಮಂಡಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತ ರಕ್ಷಿತ್ ಜೈ ಕುಮಾರ್ ಕೊಲ್ಯ ಸೇರಿದಂತೆ ಪಿಯುಸಿ, ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ವಿಜೇತರ ಪ್ರಶಸ್ತಿಗಳನ್ನು ವಿತರಿಸಲಾಯಿತು.