ಮಂಗಳೂರು: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ಈ ಬಗ್ಗೆ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ರೀತಿಯ ಆಡಳಿತಾತ್ಮಕ ಸಹಕಾರ ನೀಡಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗೆ ಬರೆದಿರುವ ಈ ಸುಧೀರ್ಘ ಪತ್ರದಲ್ಲಿ ಕ್ಯಾ. ಚೌಟ ಅವರು ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದು, ಮಂಗಳೂರು ರೈಲು ಜಾಲವನ್ನು ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವುದಕ್ಕೆ ರೈಲ್ವೆ ಸಚಿವಾಲಯವು ಈಗಾಗಲೇ ಅಗತ್ಯ ಕ್ರಮ ಕೈಗೊಂಡು ಈ ಬಗ್ಗೆ ಅಧಿಸೂಚನೆ ಕೂಡ ಹೊರಡಿಸಿದೆ. ಕರಾವಳಿ ರೈಲು ಪ್ರಯಾಣಿಕರ ಬಹು ವರ್ಷಗಳ ಈ ಬೇಡಿಕೆ ಈಡೇರಿರುವುದಿಂದ ಈ ಭಾಗಕ್ಕೆ ಮಾತ್ರವಲ್ಲ ಸಮಗ್ರ ಕರ್ನಾಟಕದ ರೈಲು ಜಾಲ ಬಲವರ್ಧನೆಗೂ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹೀಗಿರುವಾಗ, ಆದಷ್ಟು ಬೇಗ ಮಂಗಳೂರು ರೈಲು ಭಾಗವನ್ನು ಮೈಸೂರು ವಿಭಾಗದ ಜತೆಗೆ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಜತೆಗೆ, ಈ ನಿಟ್ಟಿನಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಆಡಳಿತಾತ್ಮಕ ವಿಳಂಬ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಅವರು ಸಿಎಂಗೆ ಮನವಿ ಮಾಡಿದ್ದಾರೆ.