ಕೊಣಾಜೆ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ಆಯೋಜಿಸಲಾದ “ಮಾಧವ ಕೀರ್ತನೋತ್ಸವ–2026” ಅಂತರ್ ಘಟಕ ಭಜನಾ ಸ್ಪರ್ಧೆಯು ಭಕ್ತಿ ಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸ್ಪರ್ಧೆಯಲ್ಲಿ ಯುವವಾಹಿನಿ (ರಿ.) ಗ್ರಾಮಚಾವಡಿ ಕೊಣಾಜೆ ಘಟಕದ ಭಜನಾ ತಂಡವು ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತನ್ಮಯಗೊಳಿಸಿತು. ತಂಡವು ತನ್ನ ಮೊದಲ ಪ್ರಯತ್ನದಲ್ಲೇ ಗಮನಾರ್ಹ ಸಾಧನೆ ಮಾಡಿ ದ್ವಿತೀಯ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಘಟಕದ ಹೊಸ ಭಜನಾ ತಂಡದ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ, ಹಾಗೆಯೇ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಗ್ರಾಮಚಾವಡಿ ಕೊಣಾಜೆ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ರೀತಿಯ ಸಂಕೀರ್ತನಾ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯವಾಗಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂಬ ಆಶಯವನ್ನು ಘಟಕದ ಸದಸ್ಯರು ವ್ಯಕ್ತಪಡಿಸಿದ್ದಾರೆ.