Site icon Ullalavani

ವೀರರಾಣಿ ಅಬ್ಬಕ್ಕ ಕಾಲದ 500 ವರ್ಷದ ಕೆರೆಗೆ ಕಾಯಕಲ್ಪ : ಅಷ್ಟಮಂಗಲ ಚಿಂತನೆ ಬಳಿಕ ಮತ್ತೆ ಜೀವಜಲ,150 ಸ್ವಯಂ ಸೇವಕರಿಂದ ಕರಸೇವೆ

ಮಂಗಳೂರು : ರಾಣಿ ಅಬ್ಬಕ್ಕಳ ಕಾಲದ ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕೆರೆಗೆ ಇದೀಗ ಕಾಯಕಲ್ಪ ದೊರೆತಿದೆ. ನಾಲ್ಕು ತಿಂಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಬಳಿಕ ಆರಂಭವಾದ ಪುನಶ್ಚೇತನ ಕಾರ್ಯವು ಆರು ಭಾನುವಾರಗಳ ಕರಸೇವೆಯ ಮೂಲಕ ಸಾಕಾರಗೊಂಡಿದೆ. ಸುಮಾರು 150 ಸ್ವಯಂಸೇವಕರು ಕೆರೆಯನ್ನು ಸ್ವಚ್ಛಗೊಳಿಸಿ ಮರುಬಳಕೆಗೆ ಸಜ್ಜುಗೊಳಿಸಿದ್ದಾರೆ.

ರಾಣಿ ಅಬ್ಬಕ್ಕಳ ಕಾಲದಲ್ಲಿ ಶ್ರೀ ಸೋಮನಾಥ ದೇವರೊಂದಿಗೆ ಬರುತ್ತಿದ್ದ ದರ್ಶನ ಪಾತ್ರಿಗಳು ಜಳಕ ಮಾಡುತ್ತಿದ್ದ ಕೆರೆ ಇದಾಗಿದೆ ಎಂದು ತಿಳಿಸಲಾಗಿದೆ. ಇದೀಗ ಕೆರೆಯ ನೀರನ್ನು ದೇವತಾ ಕಾರ್ಯಗಳಿಗೆ ಬಳಸುವ ಮೂಲಕ ಪುರಾತನ ಕೆರೆಗೆ ಮತ್ತೆ ಧಾರ್ಮಿಕ ಮಹತ್ವ ದೊರೆತಿದೆ.

ಉಳ್ಳಾಲದ ಕಿಣಿ ಮನೆತನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಆಧಾರದಲ್ಲಿ ಉಳ್ಳಾಲದ ಧಾರ್ಮಿಕ ಪರಂಪರೆಯ ಪುನರುಜ್ಜೀವನಕ್ಕಾಗಿ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಗುರುತಿಸಲಾದ 23 ಲೋಪಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ನಡೆಯುತ್ತಿದ್ದು, ಇದರ ಭಾಗವಾಗಿ ಎರಡು ಪುರಾತನ ಕೆರೆಗಳನ್ನು ಮರುಬಳಕೆಗೆ ಯೋಗ್ಯಗೊಳಿಸುವ ಯೋಜನೆ ರೂಪಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಉಳ್ಳಾಲದ ಹಲವು ಕುಟುಂಬಗಳಲ್ಲಿ ಅನಿರೀಕ್ಷಿತ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಲಾಗಿತ್ತು ಎಂದು ವರದಿಯಾಗಿದೆ. ಈ ವೇಳೆ ರಾಣಿ ಅಬ್ಬಕ್ಕಳ ಕಾಲದಲ್ಲಿ ಆರಾಧಿಸಲಾಗುತ್ತಿದ್ದ ದೈವ-ದೇವರುಗಳ ಪೂರ್ವಕಟ್ಟಳೆಗಳು ನಿಂತುಹೋಗಿರುವುದು ಹಾಗೂ ಕೆಲವು ದೈವಸ್ಥಾನಗಳು ಶಿಥಿಲಾವಸ್ಥೆಗೆ ತಲುಪಿರುವ ವಿಚಾರವೂ ಪ್ರಸ್ತಾಪವಾಗಿದೆ. ಇದೀಗ ನಿಂತುಹೋಗಿದ್ದ ಪೂರ್ವಕಟ್ಟಳೆಗಳ ಪುನರಾರಂಭಕ್ಕೂ ಚಾಲನೆ ನೀಡಲಾಗಿದೆ.

ಇದೇ ವೇಳೆ ಉಳ್ಳಾಲ ಮೇಲಂಗಡಿಯ ಮತ್ತೊಂದು ಪುರಾತನ ಕೆರೆಯ ಪುನಶ್ಚೇತನಕ್ಕೂ ಸಿದ್ಧತೆ ನಡೆದಿದೆ. ಇದರ ಪೂರ್ವಭಾವಿಯಾಗಿ ಕೆರೆಗೆ ಗೋಪೂಜೆ ನೆರವೇರಿಸಲಾಗಿದ್ದು, ಮುಂದಿನ ಹಂತದಲ್ಲಿ ಮಹಾರುದ್ರಯಾಗ ನಡೆಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ರಾಣಿ ಅಬ್ಬಕ್ಕಳ ಇತಿಹಾಸ ಮತ್ತು ಉಳ್ಳಾಲದ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಡಾ. ಲತಾ ರೈ ತಿಳಿಸಿದ್ದಾರೆ. ಅಬ್ಬಕ್ಕಳ ಕಾಲದ ಐತಿಹಾಸಿಕ ಪರಂಪರೆಗೆ ಸಂಬಂಧಿಸಿದ ಈ ಪುನಶ್ಚೇತನ ಕಾರ್ಯವು ಉಳ್ಳಾಲದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಪ್ರಯತ್ನಕ್ಕೂ ಹೊಸ ವೇಗ ನೀಡಿದೆ.

Exit mobile version