ಬ್ರಹ್ಮಾವರ, ಆ. 24: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ, ಮಗನೇ ತನ್ನ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಮೃತ ದಂಪತಿ. ದಂಪತಿಯ ಮಗ ಶಾಹಿದ್ ಅಲಿ (31) ಬಂಧಿತ ಆರೋಪಿ. ಶಾಹಿದ್ ಮತ್ತು ಆತನ ಪೋಷಕರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆತ, ಅವರ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.