Site icon Ullalavani

ಆ.25 ರಂದು ಮೀಲಾದುನ್ನಬಿ : ಕೋಟೆಪುರದಿಂದ ದರ್ಗಾವರೆಗೆ ಕಾಲ್ನಡಿಗೆ ಜಾಥಾ

ಉಳ್ಳಾಲ: ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ 1501 ನೇ ಜನ್ಮದಿನಾಚರಣೆ ಆ. 25ಮಂಗಳವಾರ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಕೋಟೆಪುರದಿಂದ ಆರಂಭಗೊಳ್ಳಲಿದ್ದು, ಈ ಜಾಥಾ ವು ಚೋಟಾ ಮಂಗಳೂರು, ಪೇಟೆ, ಮುಕ್ಕಚ್ಚೇರಿ, ಆಝಾದ್ ನಗರ ರಸ್ತೆಯಾಗಿ ಮೇಲಂಗಡಿ ಮೂಲಕ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೇಳಿದರು.


ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆಪುರದಿಂದ ಆರಂಭಗೊಂಡ ಈ ಜಾಥಾ 9.30 ಗಂಟೆಗೆ ದರ್ಗಾ ಝಿಯಾರತ್ ಹಾಗೂ ಸಂದೇಶದೊಂದಿಗೆ ದರ್ಗಾ ವಠಾರದಲ್ಲಿ ಸಮಾಪ್ತಿಗೊಳ್ಳಲಿದೆ. ಈ ಜಾಥಾದಲ್ಲಿ ಸಚಿವ ಯು.ಟಿ ಖಾದರ್, ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾಗಳ ವ್ಯಾಪ್ತಿಯ 34 ಮದ್ರಸ, ಮಸೀದಿಗಳ ಖತೀಬರು ಮುಅಲ್ಲಿಂಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಈದ್ ಮಿಲಾದ್ ಜಾಥಾ ಸಂದರ್ಭದಲ್ಲಿ ಬೈಕ್ ಗೆ ಹಸಿರು ಧ್ವಜ ಕಟ್ಟುವುದು, ಅನಗತ್ಯ ದ್ವಿಚಕ್ರ ವಾಹನ ರ್ಯಾಲಿಗೆ ಅವಕಾಶ ಇರುವುದಿಲ್ಲ. ಜಾಥಾದಲ್ಲಿ ಪ್ರವಾದಿ ಜನ್ಮದಿನದ ಘೋಷಣೆ ಮಾಡುವ ಒಂದು ಜೀಪ್, ಪ್ರವಾದಿ ಕೀರ್ತನೆಯ ಹಾಡುಗಳನ್ನು ಆಲಾಪಿಸುವ ಒಂದು ಟ್ರಕ್ ಮಾತ್ರ ಇರಲಿದೆ. ಉಳಿದ ಯಾವುದೇ ಘೋಷಣೆಗಳಿಗೆ, ಉಳಿದ ವಾಹನಗಳಿಗೆ ಅವಕಾಶ ಇಲ್ಲ. ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಜಾಥಾ ನಡೆಸಲಾಗುವುದು ಎಂದು ಅವರು ಹೇಳಿದರು.
ಉಳ್ಳಾಲ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝೀಮ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.

Exit mobile version