Site icon Ullalavani

ಉಡುಪಿ : ತಾಯಿ-ಮಕ್ಕಳ ಹತ್ಯೆ ಕೇಸ್ – ಆರೋಪಿ ಚೌಗುಲೆಗೆ ಜೀವ ಬೆದರಿಕೆ

ಉಡುಪಿ, ಆ. 23 : ನೇಜಾರಿನಲ್ಲಿ ತಾಯಿ ಮತ್ತು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಬೆಂಗಳೂರಿನ ಜೈಲಿನಲ್ಲಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ದೂರಲಾಗಿದ್ದು, ಈ ಬಗ್ಗೆ ಆರೋಪಿಗೆ ಭದ್ರತೆ ಒದಗಿಸುವಂತೆ ಉಡುಪಿ ಜಿಲ್ಲಾ ನ್ಯಾಯಾಲಯವು ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.


ಆ.7ರಂದು ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ವೀಡಿಯೋ ಕಾನ್ಫರೆನ್ಸ್ ಮುಗಿದ ನಂತರ ಆರೋಪಿ ಪ್ರವೀಣ್ ಚೌಗುಲೆಯನ್ನು ಜೈಲು ಕೊಠಡಿಗೆ ಹಿಂದಿರುಗಿಸುವ ಸಂದರ್ಭದಲ್ಲಿ, ಮಂಗಳೂರು ಮೂಲದವರು ಎಂದು ಹೇಳಿಕೊಂಡ 3–4 ಮಂದಿ ಜೈಲು ಕೈದಿಗಳು ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ನಡೆದ ಪ್ರಕರಣದ ವಿಚಾರಣೆಯ ಸಂದರ್ಭ ಆರೋಪಿ ಚೌಗುಲೆ, ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತಂದನು. ನನ್ನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಯು ನ್ಯಾಯಾಲಯಕ್ಕೆ ತಿಳಿಸಿದನು. ಅರಂತೆ ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಆರೋಪಿಗೆ ಸೂಕ್ತ ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.

Exit mobile version