ಕೋಟೆಕಾರು: ಮಂಗಳೂರು ಮಾಣಿಕ್ಯ, ನೆಲ್ಲಿಸ್ಥಳ, ಕೋಟೆಕಾರು ವತಿಯಿಂದ ಸಮಸ್ತ ವಿಶ್ವಕರ್ಮ ಬಾಂಧವರಿಗಾಗಿ ಆಯೋಜಿಸಲಾಗಿದ್ದ ವಿಶಿಷ್ಟ ಹಾಗೂ ವಿನೋದಭರಿತ ಗ್ರಾಮೀಣ ಕ್ರೀಡಾಕೂಟ ‘ಕೆಸರಿನಲ್ಲಿ ಒಂದು ದಿನ – 2026’ ಕಾರ್ಯಕ್ರಮ ಇತ್ತೀಚೆಗೆ ಕೋಟೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ನೀಲಿಪಾಲು ಗದ್ದೆಯಲ್ಲಿ ಅತ್ಯಂತ ವೈಭವ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮುದಾಯದ ಬಾಂಧವರಲ್ಲಿ ಪರಸ್ಪರ ಸೌಹಾರ್ದತೆ, ಪ್ರೀತಿ ಹಾಗೂ ಐಕ್ಯತೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕ್ರೀಡಾಕೂಟದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿಶ್ವಕರ್ಮ ಸಮುದಾಯದ ಬಾಂಧವರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಬೆಳಗ್ಗೆ ಧ್ವಜಾರೋಹಣದ ಬಳಿಕ, ಗದ್ದೆಗೆ ಹಾಲು ಎರೆಯುವ ಮೂಲಕ ವಿಶಿಷ್ಟವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷರಾದ ಸುಂದರ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರಾದ ನಂದಕಿಶೋರ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಜಗದೀಶ್ ಆಚಾರ್ಯ, ಮಂಗಳೂರು ಮಾಣಿಕ್ಯದ ಅಧ್ಯಕ್ಷರಾದ ಜಯಪ್ರಸಾದ್ ಆಚಾರ್ಯ, ಪ್ರಧಾನ ಅರ್ಚಕರಾದ ಪುರೋಹಿತ ರವಿಚಂದ್ರ ಆಚಾರ್ಯ ಹಾಗೂ ಗೌರವ ಸಲಹೆಗಾರರಾದ ಶಂಕರನಾರಾಯಣ ಆಚಾರ್ಯ ಮತ್ತು ದಿವಾಕರ ಆಚಾರ್ಯ ಪುತ್ತೂರು ಉಪಸ್ಥಿತರಿದ್ದರು.
ಮನರಂಜನೆಯ ಗ್ರಾಮೀಣ ಕ್ರೀಡೆಗಳು:
ದಿನಪೂರ್ತಿ ನಡೆದ ಕ್ರೀಡಾಕೂಟದಲ್ಲಿ ಎಲ್.ಕೆ.ಜಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ಹಂತಗಳಲ್ಲಿ ರೋಚಕ ಸ್ಪರ್ಧೆಗಳು ನಡೆದವು:
ಮಕ್ಕಳಿಗಾಗಿ ಓಟದ ಸ್ಪರ್ಧೆ, ಬಕೆಟ್‌ಗೆ ಚೆಂಡು ಹಾಕುವುದು, ಕಪ್ಪೆ ಜಿಗಿತ ಹಾಗೂ ಸೀಸೆಗೆ ಕೆಸರು ನೀರು ತುಂಬಿಸುವ ಆಟಗಳು ನಡೆದವು.
ಯುವಕ – ಯುವತಿಯರಿಗಾಗಿ ಕಂಬ ಸುತ್ತಿ ಓಟ, ಹಿಮ್ಮುಖ ಓಟ, ಕೊಡದೊಂದಿಗೆ ಓಟ ಹಾಗೂ ಸ್ನೇಹಿತರ ಜತೆಗೂಡಿ ಆಡುವ ಮೂರು ಕಾಲಿನ ಓಟಗಳು ಗಮನ ಸೆಳೆದವು.
ದಂಪತಿಗಳಿಗಾಗಿ ‘ಪತಿ ಪತ್ನಿಯನ್ನು ಹೊತ್ತುಕೊಂಡು ಓಟ’, ‘ಬಲೂನ್ ಜೊತೆ ಓಟ’ ಹಾಗೂ ‘ಅಡಿಕೆ ಹಾಳೆ ಎಳೆದುಕೊಂಡು ಓಟ’ ಮುಂತಾದ ಆಕರ್ಷಕ ಆಟಗಳು ಪ್ರೇಕ್ಷಕರನ್ನು ರಂಜಿಸಿದವು.
ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಹಗ್ಗಜಗ್ಗಾಟ ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳು ಕ್ರೀಡಾಂಗಣದಲ್ಲಿ ಕಳೆಗಟ್ಟಿದವು. ಸಂಜೆ ಧ್ವಜಾವರೋಹಣದ ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಾಣಿಕ್ಯದ ಅಧ್ಯಕ್ಷರಾದ ಜಯಪ್ರಸಾದ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷರಾದ ಡಾ. ಎಸ್. ಟಿ. ಗುರುದಾಸ್ ಆಚಾರ್ಯ ಹಾಗೂ ಧಾರ್ಮಿಕ ಮುಖಂಡರಾದ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕೆಸರಿನ ಗದ್ದೆಯಲ್ಲಿ ಮಿಂದೆದ್ದು, ಸಂಸ್ಕೃತಿ ಮತ್ತು ಕ್ರೀಡಾ ಮನೋಭಾವವನ್ನು ಸಂಭ್ರಮಿಸಿದ ಈ ದಿನವು ವಿಶ್ವಕರ್ಮ ಬಾಂಧವರ ಐಕ್ಯತೆಗೆ ಸಾಕ್ಷಿಯಾಯಿತು.