ಮಂಗಳೂರು: ಸ್ಕೋಪಿಂಗ್ ರಿವ್ಯೂ ಮತ್ತು ರೆಫರೆನ್ಸ್ ಮ್ಯಾನೇಜ್‌ಮೆಂಟ್‌ನಂತಹ ಸಂಶೋಧನಾ ಕೌಶಲ್ಯಗಳು ಇಂದಿನ ಶೈಕ್ಷಣಿಕ ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಈ ಕಾರ್ಯಾಗಾರವು ಸಂಶೋಧಕರಿಗೆ ಪರಿಣಾಮಕಾರಿ ಮಾರ್ಗದರ್ಶನ ನೀಡಲಿದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮೆಡಿಕಲ್ ಸಿಮ್ಯುಲೇಷನ್ ಸೆಂಟರ್‌ನ ಮುಖ್ಯ ಸಂಯೋಜಕರು ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅರಿವಳಿಕೆ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಪಾದ ಮೆಹಂದಳೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ “ದಿ ರಿಸರ್ಚ್ ಟೂಲ್‌ಕಿಟ್: ಬಿಲ್ಡಿಂಗ್ ಸ್ಕಿಲ್ಸ್ ಇನ್ ಸ್ಕೋಪಿಂಗ್ ರಿವ್ಯೂಸ್ ಅಂಡ್ ರೆಫರೆನ್ಸ್ ಮ್ಯಾನೇಜ್‌ಮೆಂಟ್” ಎಂಬ ವಿಷಯದ ಕುರಿತು ದೇರಳಕಟ್ಟೆ ಸಂಸ್ಥೆಯಲ್ಲಿ ಜರಗಿದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಕಾರ್ಯಾಗಾರಗಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ವಿಧಾನಗಳು ಮತ್ತು ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಉತ್ತಮ ಅವಕಾಶ ಒದಗಿಸುತ್ತವೆ. ವೈಜ್ಞಾನಿಕ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹಿಸಿ, ವಿಶ್ಲೇಷಿಸಿ, ದಾಖಲಿಸುವುದರ ಜೊತೆಗೆ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದರು.
ಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರೊ. ಸುಜಾತಾ ಆರ್. ಅವರ ಮಾರ್ಗದರ್ಶನದಲ್ಲಿ ಕಾರ್ಯಗಾರ ಆಯೋಜಿಸಲಾಗಿತ್ತು.
ಈ ಸಂದರ್ಭ ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಶ್ರೀರಾಮಚಂದ್ರ ಫ್ಯಾಕಲ್ಟಿ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಪ್ರೊ. ಡಾ. ಎಸ್.ಜೆ. ನಳಿನಿ, ಸಹಪ್ರಾಧ್ಯಾಪಕರಾದ ಡಾ. ಉರ್ಮಿಳಾ ಯು. ಹಾಗೂ ಕೇರಳದ ನಾಲೆಡ್ಜ್ ಸೆಂಟರ್, ಡಿಜಿಟಲ್ ಯೂನಿವರ್ಸಿಟಿಯ ಮುಖ್ಯಸ್ಥರಾದ ಡಾ. ಗೋಪಕುಮಾರ್ ವಿ. ಅವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ಅಮೂಲ್ಯ ಜ್ಞಾನ ಮತ್ತು ಪರಿಣತಿಯನ್ನು ಹಂಚಿಕೊಂಡರು.
ಕಾರ್ಯಾಗಾರದ ವಿವಿಧ ಅಧಿವೇಶನಗಳಲ್ಲಿ ಸ್ಕೋಪಿಂಗ್ ರಿವ್ಯೂಗಳ ಮೂಲಭೂತ ಅಂಶಗಳು ಮತ್ತು ಅನ್ವಯಿಕೆಗಳು, ಸಾಹಿತ್ಯ ಹುಡುಕಾಟದ ತಂತ್ರಗಳು, ಸಾಕ್ಷ್ಯ ಸಂಶ್ಲೇಷಣೆ, ಸಂಶೋಧನಾ ಸಂಘಟನೆ ಹಾಗೂ ಪರಿಣಾಮಕಾರಿ ಉಲ್ಲೇಖ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಸಂವಾದಾತ್ಮಕ ಹಾಗೂ ಪ್ರಾಯೋಗಿಕ ಅಧಿವೇಶನಗಳ ಮೂಲಕ ಸಂಶೋಧನೆಯನ್ನು ವ್ಯವಸ್ಥಿತವಾಗಿ ಯೋಜಿಸುವುದು, ನಡೆಸುವುದು ಮತ್ತು ದಾಖಲಿಸುವ ಕುರಿತು ಭಾಗವಹಿಸಿದವರಿಗೆ ಪ್ರಾಯೋಗಿಕ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲಾಯಿತು.
ಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಂಘಟನಾ ಕಾರ್ಯದರ್ಶಿ ಜೀವಿತಾ ಆಳ್ವ ಸಂಯೋಜಿಸಿದ್ದರು. ಉಪನ್ಯಾಸಕಿ ಹಾಗೂ ಜಂಟಿ ಕಾರ್ಯದರ್ಶಿ ಕು. ಶೆರಿಲ್ ಫೆರ್ನಾಂಡಿಸ್ ಸಹಕರಿಸಿದರು.
ಡಾ. ಶಾರ್ಲೆಟ್ ಸಿಂಪಲ್ ಡಿ’ಸೋಜಾ, ಸಹಪ್ರಾಧ್ಯಾಪಕಿ ಫ್ರಾನ್ಸಿಲ್ಲಾ ಸೋನಿಯಾ ಡಿ’ಸೋಜಾ, ಸುಪ್ರೀತಾ ಮೆಂಡನ್ ಹಾಗೂ ಮರ್ಸಿ ಮೆಟಿಲ್ಡಾ ಜತೆಗಿದ್ದರು. ಒಟ್ಟು 65 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.