ಕೊಣಾಜೆ: ಇಂದು ನಾವು ಆಧುನಿಕತೆ ತಂತ್ರಜ್ಞಾನಗಳ ನಡುವೆ ಬಹಳಷ್ಟು ಮುಂದುವರಿದ್ದರೂ ನಮ್ಮ ಸಂಸ್ಕೃತಿ, ಸಂಪ್ರದಾಯದ ಕುರಿತು ಹಿರಿಯರ ಅನುಭವದ ಮಾತುಗಳನ್ನು ಎಂದಿಗೂ ಕಡೆಗಣಿಸಬಾರದು. ಅವುಗಳೇ ನಮ್ಮ ಬದುಕಿನ ಮೌಲ್ಯಗಳನ್ನು ಹೆಚ್ಚಿಸಬಲ್ಲುದು. ವೈಶಿಷ್ಟ್ಯಪೂರ್ಣವಾದ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಯುವ ತುಳು ಸಂಶೋಧಕ ವಿಜೇತ್ ಮಂಜನಾಡಿ ಅವರು ತಿಳಿಸಿದರು.
ಅವರು ಪಟ್ಟೋರಿ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಮಹಿಳಾ ಸಮಿತಿಯ ವತಿಯಿಂದ ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಪರಿವಾರ ದೈವಗಳ ಕ್ಷೇತ್ರದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೊಣಾಜೆ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಮಕೃಷ್ಣ ಪಟ್ಟೋರಿ ಅವರು ಮಾತನಾಡಿ, ಆಟಿಯ ತಿಂಗಳಲ್ಲಿ ಇದ್ದ ಆಹಾರ ಪದ್ದತಿಯನ್ನು ನಾವು ವೈಜ್ಞಾನಿಕವಾಗಿ ನೋಡಿದರೂ ಅದರಲ್ಲಿರುವ ಔಷಧೀಯ ಅಂಶಗಳು ನಮ್ಮಗಮನಸೆಳೆಯುತ್ತದೆ. ಯುವ ಸಮುದಾಯ ಆಟಿ ಆಚರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಣಾಜೆ ಬೀಡುವಿನ ಸತ್ಯನಾರಾಯಣ ಭಟ್ ಅವರು ಮಾತನಾಡಿ, ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಹಿಂದಿನ ಸಂಪ್ರದಾಯ, ಆಚರಣೆಗಳನ್ನು ಮತ್ತೆ ನೆನಪಿಸುವ ಕಾರ್ಯ ಆಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಡಿ ಪ್ರಧಾನ ತಿಮ್ಮಯ್ಯ ಕಾಜವ ಯಾನೆ ದಿವಾಕರ ಭಂಡಾರಿ , ಮಹಿಳಾ ಮಂಡಳಿ ಅಧ್ಯಕ್ಷರಾದ ಪ್ರಮಿಳಾ , ನಾಗವೇಣಿ ಅಸೈಗೋಳಿ, ಹಿರಿಯ ಮುಖಂಡರಾದ ಕರುಣಾಕರ ಕಾನ, ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಣರಾದ ವಿಶ್ವನಾಥ ಪಟ್ಟೋರಿ, ರವಿ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಸಮಿತಿಯ ನಿಶಾ ರವಿಕಾನ ಸ್ವಾಗತಿಸಿದರು. ಲೋಲಾಕ್ಷಿ ವಸಂತ್ ವಂದಿಸಿದರು. ಲಾವಣ್ಯ ಹರೀಶ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ರವಿ ಪಟ್ಟೋರಿ ಹಾಗೂ ಪ್ರವೀಣ್ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು.