Site icon Ullalavani

ಹಿರಿಯರ ಸಮರ್ಪಣಾ ಭಾವ ಮಕ್ಕಳಿಗೆ ನೀಡಿ: ತೇಜಸ್ವಿನಿ ರಮೇಶ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಹಿಂದೂ ಧರ್ಮವೆಂದರೆ ಅದೊಂದು ಜೀವನ ಶೈಲಿ, ಪ್ರತಿಯೊಂದರಲ್ಲಿಯೂ ದೇವರನ್ನು ಕಾಣುವುದು ಇದರ ವೈಶಿಷ್ಠ್ಯ. ದೇವರು ಕೇವಲ ಸ್ವರೂಪದಲ್ಲಿ ಇಲ್ಲ, ದೇವರು ನಂಬಿಕೆಯಲ್ಲಿ ಇದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ.

ಅವರು ಉಳ್ಳಾಲದ 68ನೇ ಸಾರ್ವಜನಿಕ ನವರಾತ್ರಿ ಶ್ರೀ ಶಾರದೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುತ್ತು ರತ್ನಗಳನ್ನು ಬೀದಿಬೀದಿಗಳಲ್ಲಿ ಇಟ್ಟು ಅಳೆದು ಮಾರಿದ ದೇಶ ನಮ್ಮದು. ಅಂತಹ ಸಂಪತ್ತನ್ನು ಬ್ರಿಟೀಷರು, ಫ್ರೆಂಚರು ಮುಂತಾದ ವಿದೇಶೀಯರು ಲೂಟಿಮಾಡಿದರು. ಆದರೂ ನಾವು ಕುಗ್ಗಲಿಲ್ಲ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅನೇಕರು ತಮ್ಮ ಶೌರ್ಯವನ್ನು ಮೆರೆದಿದ್ದಾರೆ. ನಮ್ಮ ಸಂಸ್ಕøತಿ, ಆಚರಣೆ, ಮೌಲ್ಯಗಳ ಮೇಲೆ ಶತಮಾನಗಳಿಂದ ದಾಳಿಗಳು ನಡೆಯುತ್ತಲೇ ಇವೆ. ಇದನ್ನು ಎದುರಿಸಬೇಕಾದರೆ ಹಿರಿಯರು ಹಾಕಿಕೊಟ್ಟ ಸಮರ್ಪಣಾ ಹಾದಿಯಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಜಾಗೃತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ರಘುಚಂದ್ರ ಬಲ್ಲಾಳ್ ವಹಿಸಿದ್ದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಯು. ಲೋಕನಾಥ ಅಮೀನ್, ಶ್ರೀ ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷೆಯಾದ ಜಾನಕೀ ಪುತ್ರನ್, ಶ್ರೀ ಶಾರದಾ ಯುವ ವೇದಿಕೆಯ ಅಧ್ಯಕ್ಷರಾದ ರವಿಶಂಕರ್ ವಿ. ಎಂ. ಮುಖ್ಯ ಅತಿಥಿಗಳಾಗಿದ್ದರು.

ಎಂ. ವಾಸುದೇವ ರಾವ್ ಮತ್ತು ಪಶುಪತಿ ಉಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ವೇದಿಕೆ ಸದಸ್ಯರಾದ ಶುಭಾ ಮತ್ತು ಮಂಗಳಾ ಮಲ್ಯ ಪ್ರಾರ್ಥನೆ ನಡೆಸಿದರು. ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭರತ್‍ಕುಮಾರ್ ಸ್ವಾಗತಿಸಿದರು. ಸದಸ್ಯರಾದ ರವೀಂದ್ರ ರಾಜ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Exit mobile version