ದೇರಳಕಟ್ಟೆ: ಯೆನೆಪೊಯ ಆಸ್ಪತ್ರೆ ಮುಂಭಾಗದಲ್ಲಿ ಮೀನು ಮಾರಾಟ ಮಾಡುವ ಗಾಡಿಯೊಂದರಿಂದ ಹೊರಬರುವ ಮೀನಿನ ಐಸ್ ನೀರನ್ನು ಸಾರ್ವಜನಿಕರು ಓಡಾಡುವ ರಸ್ತೆಯ ಬದಿಗೆ ನೇರವಾಗಿ ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮೀನು ಮಾರಾಟದ ಗಾಡಿಯಿಂದ ನಿರಂತರವಾಗಿ ನೀರು ರಸ್ತೆಯ ಬದಿಗೆ ಹರಿಯುತ್ತಿರುವುದರಿಂದ ಸ್ಥಳದಲ್ಲಿ ತೀವ್ರ ದುರ್ವಾಸನೆ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದೇ ಸ್ಥಳದಲ್ಲಿ ಬಸ್ಗಳು ನಿಲ್ಲುವುದರಿಂದ ರಸ್ತೆಯ ಮೇಲೆ ನೀರು ಹರಿದು ಬಸ್ ಹತ್ತುವ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ.
ಇದರ ಜೊತೆಗೆ ರಸ್ತೆಯ ಬದಿಯಲ್ಲಿ ಕೊಳಕು ನೀರು ನಿಂತುಕೊಳ್ಳುವುದರಿಂದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಯನ್ನು ನಿರ್ಲಕ್ಷಿಸದೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.