Site icon Ullalavani

ಕಲ್ಲಾಪುವಿನ ಔಟ್‌ಡೋರ್ ಗ್ರ್ಯಾಂಡ್‌ಬೇಯಲ್ಲಿ ಡಕ್ಷ್ ಪ್ಲೇ ಸ್ಕೂಲ್ ಅದ್ದೂರಿ ಸ್ವಾತಂತ್ರ್ಯ ದಿನ ಆಚರಣೆ

ಉಳ್ಳಾಲ: ಉಳ್ಳಾಲಬೈಲ್‌ನ ಡಕ್ಷ್ ಪ್ಲೇ ಸ್ಕೂಲ್ ವತಿಯಿಂದ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಕಲ್ಲಾಪುವಿನ ಔಟ್‌ಡೋರ್ ಗ್ರ್ಯಾಂಡ್‌ಬೇಯಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಿಸಿ ಔಟ್‌ಡೋರ್ ಕಲ್ಲಾಪು ಇದರ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಹಾಶಿರ್ ಜೀವನದಲ್ಲಿ ಪ್ರತಿಯೊಬ್ಬರಿಗೂ ಇರುವ ದೊಡ್ಡ ಭಯವೆಂದರೆ ಸಾವು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ, ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ದೊರೆಯಬೇಕು ಎಂಬ ಸಂಕಲ್ಪದಿಂದ ಅನೇಕರು ಜೀವ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮರ ತ್ಯಾಗವನ್ನು ಸ್ಮರಿಸಿ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ . ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಹಾಗೂ ಬಲಿದಾನವನ್ನು ಸದಾ ಸ್ಮರಿಸಬೇಕು ಎಂದರು.

ಅಂತರರಾಷ್ಟ್ರೀಯ ಕಲಾವಿದ ಹಾಗೂ ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ಮಕ್ಕಳೊಂದಿಗೆ ಮಕ್ಕಳಾಗುವ ಅವಕಾಶ ದೊರೆತಿದ್ದು ತುಂಬಾ ಸಂತೋಷ ತಂದಿದೆ ಎಂದರು.
ಇಂದಿನ ಮಕ್ಕಳು ಸಾಕಷ್ಟು ಒತ್ತಡದ ಜೀವನ ನಡೆಸುವಂತಾಗಿದೆ. ಮಕ್ಕಳಲ್ಲಿ ಇರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸುವ ಬದಲು, ಹೆತ್ತವರು ತಮ್ಮ ಇಚ್ಛೆಯಂತೆ ಅವರನ್ನು ವಿವಿಧ ಚಟುವಟಿಕೆಗಳಿಗೆ ಸೇರಿಸುವ ಮೂಲಕ ಮಕ್ಕಳ ಸ್ವಂತ ಆಸಕ್ತಿ ಮತ್ತು ಭವಿಷ್ಯದ ಕನಸುಗಳನ್ನೇ ಮರೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೆತ್ತವರನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ. ಹೆತ್ತವರ ಜೀವನದ ಕೊನೆಯ ಹಂತದಲ್ಲೂ ಅವರಿಗೆ ಗೌರವ, ಪ್ರೀತಿ ಮತ್ತು ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಸುಮಲತಾ ಕೊಣಾಜೆ, ಪತ್ರಕರ್ತೆ ವಜ್ರ ಗುಜರನ್, ರೋಶಿ ನಿಲಯದ ಉಪ ಪ್ರಾಧ್ಯಾಪಕರಾದ ಸಂದೀಪ್ ಸಾಲ್ಯಾನ್,ನೃತ್ಯ ನಿರ್ದೇಶಕ ಹಾಗೂ ಎನ್.ಎಸ್. ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕ ರೋಹಿತ್ ಮಾಸ್ಟರ್ ಉಪಸ್ಥಿತರಿದ್ದರು.
ಡಕ್ಷ್ ಪ್ಲೇ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಭವ್ಯ ಗಾಣಿಗ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.

ಪುಟಾಣಿ ಮಕ್ಕಳಿಂದ ದೇಶಭಕ್ತಿ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಕರ್ಷಕ ನೃತ್ಯ ಪ್ರದರ್ಶನಗಳು ನಡೆದವು. ಮಕ್ಕಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಹಾಗೂ ದೇಶದ ಬಗ್ಗೆ ಗೌರವ ಬೆಳೆಸುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವವನ್ನು ಆಯೋಜಿಸಲಾಗಿತ್ತು.

ಪ್ರಕೃತಿಗೂ ಸ್ವಾತಂತ್ರ್ಯ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರವಾಸ ಹಾಗೂ ಟ್ರೆಕ್ಕಿಂಗ್‌ಗೆ ತೆರಳುವ ಕೆಲವರು ಮೋಜು-ಮಸ್ತಿಯಲ್ಲಿ ತೊಡಗಿ, ಖಾಲಿ ಮದ್ಯದ ಬಾಟಲಿ ಸೇರಿದಂತೆ ತ್ಯಾಜ್ಯವನ್ನು ಕಾಡು ಹಾಗೂ ಪ್ರವಾಸಿ ತಾಣಗಳಲ್ಲಿ ಎಸೆಯುತ್ತಾರೆ. ಇಂತಹ ಬಾಟಲಿಗಳು ಪ್ರಾಣಿಗಳ ಕಾಲಿಗೆ ತಾಗಿ ಅವುಗಳಿಗೆ ಗಾಯವಾಗುವುದಲ್ಲದೆ, ಅವುಗಳ ಸಹಜ ಸಂಚಾರಕ್ಕೂ ಅಡ್ಡಿಯಾಗುತ್ತದೆ. ಮನುಷ್ಯರು ತಮ್ಮ ಸ್ವಾತಂತ್ರ್ಯವನ್ನು ಅನುಭವಿಸುವಾಗ ಪ್ರಕೃತಿ ಹಾಗೂ ಪ್ರಾಣಿ ಸಂಕುಲದ ಸ್ವಾತಂತ್ರ್ಯವನ್ನೂ ಗೌರವಿಸಬೇಕು.
ದಿನೇಶ್ ಹೊಳ್ಳ.
ಅಂತರರಾಷ್ಟ್ರೀಯ ಕಲಾವಿದ ಹಾಗೂ ಪರಿಸರವಾದಿ

Exit mobile version