ಉಳ್ಳಾಲ: ಮನಸ್ಸು ಶಾಂತವಾಗಿ ಮತ್ತು ಸ್ಥಿರವಾಗಿದ್ದಾಗ ಮಾತ್ರ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ. ಮಕ್ಕಳು ಓದಲು ಕುಳಿತುಕೊಳ್ಳುವ ಮುನ್ನ ಉಸಿರಾಟದ ವ್ಯಾಯಾಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ಉತ್ತಮವಾಗಿ, ಓದಿನ ಮೇಲೆ ಏಕಾಗ್ರತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಂತರಾಷ್ಟ್ರೀಯ ಮಟ್ಟದ ಮನಸ್ಸಿನ ತರಬೇತುದಾರರಾದ ಡಾ. ಸರ್ಫ್ರಾಜ್ ಜೆ. ಹಾಸಿಮ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ವತಿಯಿಂದ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಮ್ಮೆ ಓದಲು ಕುಳಿತಾಗ ಸುಮಾರು 40 ನಿಮಿಷಗಳ ಕಾಲ ಏಕಾಗ್ರತೆಯಿಂದ ಓದಿ, ಬಳಿಕ 10 ನಿಮಿಷಗಳ ವಿರಾಮ ಪಡೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದಲು ಆರಂಭಿಸುವ ಮುನ್ನ ಅಧ್ಯಯನ ಮಾಡಬೇಕಾದ ವಿಷಯಗಳ ಮೇಲೆ ಒಮ್ಮೆ ಕಣ್ಣಾಡಿಸಿ, ನಂತರ ಓದಲು ಪ್ರಾರಂಭಿಸುವುದರಿಂದ ಮನಸ್ಸು ಸ್ಥಿರವಾಗಿರಲು ಮತ್ತು ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಇಂಗ್ಲಿಷ್ ಕಲಿಕೆಗೆ ಹಿಂಜರಿಕೆ ಬೇಡ
ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮುನಿರಾ ಅವರು ಆಂಗ್ಲ ಭಾಷೆಯನ್ನು ಸುಲಭವಾಗಿ ಕಲಿಯುವ ಕುರಿತು ಮಾಹಿತಿ ನೀಡಿದರು.
ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಇಂಗ್ಲಿಷ್ ಬರುವುದಿಲ್ಲ ಎಂಬ ಹಿಂಜರಿಕೆ ಹೊಂದಬಾರದು. ಇಂದು ಶ್ರೇಷ್ಠ ಮಟ್ಟದ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಹಲವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಇಂಗ್ಲಿಷ್ ತರಗತಿಯಲ್ಲಿ ಸಾಧ್ಯವಾದಷ್ಟು ಇಂಗ್ಲಿಷ್‌ನಲ್ಲೇ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆ ಅವರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತರಾದ ಸತೀಶ್ ಭಟ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ಸಂಶೋಧನಾ ಸಹಾಯಕಿ ಡಾ. ನಯನ ಕೃಷ್ಣಾಪುರ, ಕಚೇರಿ ಸಹಾಯಕಿ ಶ್ರೀಮತಿ ಸಂಧ್ಯಾ, ಶಾಲಾ ಶಿಕ್ಷಕರಾದ ಕೃಷ್ಣ ಶಾಸ್ತ್ರೀ, ಶಿವಕುಮಾರ್, ಸ್ಮಿತಾ, ಯಶಸ್ವಿನಿ, ಭವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.