Site icon Ullalavani

ಮಂಗಳೂರು ವಿಭಾಗದ 9 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಮಂಗಳೂರು : ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಲೋಕಾಯುಕ್ತರು ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣಗಳ ಆಧಾರದ ಮೇಲೆ ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಏಕಕಾಲಕ್ಕೆ ದಿಢೀರ್ ತಪಾಸಣೆ ನಡೆಸಿದ್ದಾರೆ.
ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ಹಾಗೂ ಬೆಳ್ತಂಗಡಿ ತಾಲೂಕು ಕಚೇರಿಗಳಲ್ಲಿ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಯಿತು. ಲೋಕಾಯುಕ್ತ ದಿನೇಶ್ ಬಿಪಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ನಾಲ್ವರು ಡಿಎಸ್‌ಪಿಗಳು, ಐವರು ಇನ್ಸ್‌ಪೆಕ್ಟರ್‌ಗಳು ಹಾಗೂ 55 ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು. ತಾಲೂಕು ಕಚೇರಿಗಳ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅಧಿಕಾರಿಗಳು ದೀರ್ಘಕಾಲದಿಂದ ಬಾಕಿ ಉಳಿದಿರುವ ಕಡತಗಳು, ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳು, ವಿಲೇವಾರಿಯಾಗಿರುವ ಪ್ರಕರಣಗಳು ಹಾಗೂ ಇನ್ನೂ ಬಾಕಿ ಇರುವ ಅರ್ಜಿಗಳ ವಿವರಗಳನ್ನು ಪರಿಶೀಲಿಸಿದರು.

ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ತಾಲೂಕು ಕಚೇರಿಗಳಲ್ಲಿ ಪ್ರಕರಣಗಳ ಕಡತಗಳು, ಹಿಂದಿನ ಆದೇಶಗಳು, ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಲಾಯಿತು. ಕೆಲವು ವಿಭಾಗಗಳಲ್ಲಿ ಕಡತಗಳು ಬಹಳ ಸಮಯದಿಂದ ಬಾಕಿ ಉಳಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಇಷ್ಟು ದಿನ ಕಡತಗಳನ್ನು ಏಕೆ ವಿಲೇವಾರಿ ಮಾಡಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ತಹಶೀಲ್ದಾರ್, ಉಪ ತಹಶೀಲ್ದಾರ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಲೋಕಾಯುಕ್ತ ತಂಡ ಮಾಹಿತಿ ಪಡೆದುಕೊಂಡಿದೆ.

ಸುಳ್ಯ ತಾಲೂಕು ಕಚೇರಿಯಲ್ಲಿ ಪಂಬೆತ್ತಾಡಿ ಮತ್ತು ಕುತ್ಕುಂಜ ಗ್ರಾಮಗಳಲ್ಲಿ ಒಂದೇ ಕುಟುಂಬದ ಮೂವರಿಗೆ ಸೆಕ್ಷನ್ 94C ಅಡಿಯಲ್ಲಿ ಭೂಮಿ ಮಂಜೂರು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಸಂಬಂಧಿತ ಕಡತವನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕನಕಮಜಲುವಿನ ಸೋಮನಾಥ್ ಎಂಬವರು 94C ಪ್ರಕರಣಕ್ಕೆ ಸಂಬಂಧಿಸಿದ ಸಮಸ್ಯೆಯ ಕುರಿತು ದಾಖಲೆಗಳನ್ನು ಅಧಿಕಾರಿಗಳಿಗೆ ತೋರಿಸಿದ್ದು, ಡಿಎಸ್‌ಪಿ ಸಂಬಂಧಿತ ಫೈಲ್ ಸಂಖ್ಯೆ ಹಾಗೂ ಕೇಸ್‌ವರ್ಕರ್‌ನ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.

ಉಳ್ಳಾಲ ತಾಲೂಕು ಕಚೇರಿಯ ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿಶೇಷವಾಗಿ ದಾಖಲೆಗಳ ಪರಿಶೀಲನೆ ನಡೆಸಿದರು. ಬೆಳಗ್ಗೆ 11 ಗಂಟೆಯಿಂದ ರಾತ್ರಿಯವರೆಗೆ ನಡೆದ ತಪಾಸಣೆಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಕಡತಗಳು, ಬಗರ್ ಹುಕುಂ ಯೋಜನೆಯಡಿ ಬಾಕಿ ಇರುವ ಭೂಮಿ ಮಂಜೂರು ಅರ್ಜಿಗಳು ಹಾಗೂ ಸರ್ಕಾರಿ ಭೂಮಿ ಖಾಸಗಿಯವರ ವಶಕ್ಕೆ ಹೋಗಿದೆ ಎಂಬ ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಯಿತು. ಕೆಲವು ಸಾರ್ವಜನಿಕರು ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲೇ ತಮ್ಮ ದೂರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವುಗಳನ್ನೂ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ್ಕಿ ಮತ್ತು ಮೂಡುಬಿದಿರೆ ತಾಲೂಕು ಕಚೇರಿಗಳಿಗೂ ಲೋಕಾಯುಕ್ತ ತಂಡ ಹಠಾತ್ ಭೇಟಿ ನೀಡಿ ರಾತ್ರಿ ವೇಳೆಯವರೆಗೂ ದಾಖಲೆಗಳ ಪರಿಶೀಲನೆ ನಡೆಸಿತು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕಡತಗಳು, ಇತ್ತೀಚೆಗೆ ವಿಲೇವಾರಿಯಾದ ಪ್ರಕರಣಗಳು ಹಾಗೂ ಸಾರ್ವಜನಿಕ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಕುರಿತು ಅಧಿಕಾರಿಗಳು ಸಿಬ್ಬಂದಿಯಿಂದ ವಿವರಗಳನ್ನು ಪಡೆದರು.

ತಪಾಸಣೆ ವೇಳೆ ಆಡಳಿತಾತ್ಮಕ ಕಾರ್ಯನಿರ್ವಹಣೆ ಮತ್ತು ಕಡತ ನಿರ್ವಹಣೆಯಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ. ದಿಢೀರ್ ಕಾರ್ಯಾಚರಣೆಯಲ್ಲಿ ಎಲ್ಲಾ ತಾಲೂಕು ಕಚೇರಿಗಳ ವಿವಿಧ ವಿಭಾಗಗಳನ್ನು ಪರಿಶೀಲಿಸಲಾಗಿದ್ದು, ತಪಾಸಣೆಯ ಸಂಪೂರ್ಣ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version