ಉಳ್ಳಾಲ: ಸಾಂಪ್ರದಾಯಿಕವಾಗಿ ನಡೆಯುವ ‘ಕೆಸರಿನ ಗದ್ದೆಯಲ್ಲೊಂದು ದಿನ’ ಕಾರ್ಯಕ್ರಮವು ಹಳ್ಳಿಯ ಸೊಗಡನ್ನು ಮತ್ತೆ ನೆನಪಿಸಿದ್ದು, ಈ ಮೂಲಕ ಜನರಿಗೆ ಹಿಂದಿನ ದಿನಗಳ ಜೀವನಶೈಲಿಯ ಅನುಭವವನ್ನು ನೀಡುವ ಕಾರ್ಯವಾಗುತ್ತಿದೆ ಎಂದು ಶ್ರೀ ಕ್ಷೇತ್ರ ಕೊಂಡಾಣ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರ್ಷರಾಜ್ ಮುದ್ಯ ಅಭಿಪ್ರಾಯಪಟ್ಟರು.
ಶ್ರೀ ನಾಗಬ್ರಹ್ಮ ಸೇವಾ ಸಮಿತಿ ಪಿಲಾರು ಲಕ್ಷ್ಮೀಗುಡ್ಡೆ, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಪಿಲಾರು, ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘ ಉಳ್ಳಾಲ ಮತ್ತು ಲಗೋರಿ ಟೀಂ ಪಿಲಾರು ಇವರ ಸಂಯುಕ್ತ ಆಶ್ರಯದಲ್ಲಿ ಪಿಲಾರುಬೈಲು ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟ–2026ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಮಾರು 50 ವರ್ಷಗಳ ಹಿಂದೆ ತಮ್ಮ ರಾಜಕೀಯ ಪ್ರವೇಶಕ್ಕೆ ಸಿಪಿಎಂ ಒಂದು ಮೆಟ್ಟಿಲಾಗಿತ್ತು ಎಂದು ನೆನಪಿಸಿಕೊಂಡ ಅವರು, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಹಾಗೂ ಸ್ವಾಭಿಮಾನವನ್ನು ಪ್ರತಿಯೊಬ್ಬರೂ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಕಲಿಯಬೇಕಿದೆ ಎಂದರು. ಅಂದು ತಮ್ಮದೇ ದುಡಿಮೆಯ ಹಣದಿಂದ ಜನರ ನಡುವೆ ಕೆಲಸ ಮಾಡಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದ ಕಾಲವಿತ್ತು. ಸರಳತೆ, ಪ್ರಾಮಾಣಿಕತೆ ಮತ್ತು ಜನಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ನಿರಾಡಂಬರ ಜೀವನ ನಡೆಸುತ್ತಾ, ಜಾತಿ–ಪಕ್ಷದ ಭೇದವಿಲ್ಲದೆ ಎಲ್ಲರಿಗೂ ಸಹಕರಿಸಿದ ಕ್ಷೇತ್ರದ ಶಾಸಕರ ಸೇವೆ ಶ್ಲಾಘನೀಯ. ಇಂತಹ ಜನಪರ ನಾಯಕತ್ವ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರಕೃತಿಯೊಂದಿಗೆ ಮಕ್ಕಳ ಒಡನಾಟ ಅಗತ್ಯ: ಪುಷ್ಪರಾಜ್ ಬಿ.ಎನ್
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಇಂತಹ ಉತ್ತಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಯುವಕರ ಬೆನ್ನುತಟ್ಟಿ ‘ನಾವಿದ್ದೇವೆ’ ಎಂದು ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೈಸರ್ಗಿಕ ಚಿಕಿತ್ಸೆಯಲ್ಲಿ ಬಳಸುವ ಮಡ್ ಥೆರಪಿಗೆ ಸುಮಾರು ₹2,500ರಷ್ಟು ವೆಚ್ಚವಾಗುತ್ತದೆ. ಆದರೆ ಕೆಸರಿನ ಗದ್ದೆಯಲ್ಲಿ ಒಂದು ದಿನ ಕಳೆಯುವ ಮೂಲಕ ಮಕ್ಕಳಿಗೆ ಉಚಿತವಾಗಿ ಮಣ್ಣಿನ ಚಿಕಿತ್ಸೆಯ ಅನುಭವ ದೊರೆಯುತ್ತಿದೆ. ಇಂದಿನ ಮಕ್ಕಳಿಗೆ ಮಣ್ಣಿನ ಸಂಪರ್ಕವೇ ಇಲ್ಲದಂತಾಗಿದೆ. ವ್ಯಾನ್‌ನಿಂದ ನೇರವಾಗಿ ಎ.ಸಿ. ಕೊಠಡಿಯ ಶಾಲೆಗೆ, ಅಲ್ಲಿಂದ ಮತ್ತೆ ಮನೆಗೆ ಎಂಬ ಯಾಂತ್ರಿಕ ಜೀವನಶೈಲಿ ರೂಢಿಯಾಗುತ್ತಿದೆ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು.
ಮಕ್ಕಳು ಪ್ರಕೃತಿಯೊಂದಿಗೆ ಬೆರೆಯಬೇಕು, ಮಣ್ಣಿನೊಂದಿಗೆ ಆಟವಾಡಬೇಕು ಹಾಗೂ ಗ್ರಾಮೀಣ ಬದುಕಿನ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದ ಕೆಸರಿನ ಗದ್ದೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲರೂ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಹೇಳಿದರು.
ಸಂಘಟನೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿ: ರಾಕೇಶ್ ಲಕ್ಷ್ಮೀಗುಡ್ಡೆ
ಉದ್ಯಮಿ ರಾಕೇಶ್ ಲಕ್ಷ್ಮೀಗುಡ್ಡೆ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿ ಪ್ರತೀ ವರ್ಷ ದೈಹಿಕ ಹಾಗೂ ಮಾನಸಿಕ ಸದೃಢತೆಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿ ಆರೋಗ್ಯ, ಒಗ್ಗಟ್ಟು ಹಾಗೂ ಪ್ರಕೃತಿಯೊಂದಿಗೆ ಬೆರೆಯುವ ಮನೋಭಾವ ಬೆಳೆಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವ ಸಂಘಟನೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದು ಬರಲಿ ಎಂದು ಹಾರೈಸಿದರು.
ಸಾಮಾಜಿಕ ಒಗ್ಗಟ್ಟಿನ ಸಂದೇಶ ಸಾರುವ ಕಾರ್ಯಕ್ರಮ: ಜಗದೀಶ್ ಉಚ್ಚಿಲ್
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಗದೀಶ್ ಉಚ್ಚಿಲ್ ಮಾತನಾಡಿ, ಜಾತಿ–ಮತ–ಭೇದಗಳನ್ನು ಬದಿಗೊತ್ತಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿರುವ ಪಿಲಾರು ನೆಲದ ಈ ಕಾರ್ಯಕ್ರಮ ವಿಶಿಷ್ಟ ಹಾಗೂ ಶ್ಲಾಘನೀಯವಾಗಿದೆ. ಸಾಮಾಜಿಕ ಒಗ್ಗಟ್ಟು, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುತ್ತಿರುವ ಕಾರ್ಯಕ್ರಮ ಮುಂದೆಯೂ ನಿರಂತರವಾಗಿ ನಡೆಯಬೇಕು. ಇನ್ನಷ್ಟು ಜನರನ್ನು ಒಗ್ಗೂಡಿಸಿ ಯುವಜನರಿಗೆ ಪ್ರೇರಣೆಯಾಗುವ ಕಾರ್ಯಕ್ರಮವಾಗಿ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ರಾಕೇಶ್ ಲಕ್ಷ್ಮೀಗುಡ್ಡೆ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಗದೀಶ್ ಉಚ್ಚಿಲ್, ಸೋಮೇಶ್ವರ ಪುರಸಭೆ ನಾಮನಿರ್ದೇಶಿತ ಸದಸ್ಯ ಶ್ರೀಧರ್ ಆಳ್ವ, ಹಿರಿಯ ರೈತ ಮುಖಂಡ ಗಂಗಯ್ಯ ಗಟ್ಟಿ ಪಿಲಾರ್, ಹಸನಬ್ಬ, ಈಶ್ವರ್ ಶೆಟ್ಟಿ, ಗೀತಾ, ವ್ಯಾಯಾಮ ಶಾಲೆ ಅಧ್ಯಕ್ಷ ಪುರಂದರ ದಾಸ್ ಉಪಸ್ಥಿತರಿದ್ದರು.
ಸಂಜೀವ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಕರ್ಕಡ ಬಹುಮಾನ ವಿಜೇತರ ವಿವರ ನೀಡಿದರು. ಚಂದ್ರಹಾಸ್ ಪಿಲಾರ್ ವಂದಿಸಿದರು.