ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಇಲ್ಲದೆ ಸಾರ್ವಜನಿಕರು ದಿನನಿತ್ಯ ಪರದಾಡುವಂತಾಗಿದೆ. ಪಂಚಾಯತ್‌ಗೆ ಪ್ರಭಾರ ಅಧಿಕಾರಿಯನ್ನು ನೇಮಿಸಿದ್ದರೂ, ಅವರು ಕೂಡ ಸಮರ್ಪಕವಾಗಿ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಅಧಿಕಾರಿಯ ಗೈರುಹಾಜರಿಯ ಬಗ್ಗೆ ವಿಚಾರಿಸಿದಾಗ, “ಇಲ್ಲಿ ಸಭೆ ಇದೆ, ಅಲ್ಲಿ ಸಭೆ ಇದೆ” ಎಂದು ಕಾರಣಗಳನ್ನು ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಪಂಚಾಯತ್‌ಗೆ ಆಗಮಿಸುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರೊಂದಿಗೆ ಪಂಚಾಯತ್ ಆವರಣದಲ್ಲೇ ಕಸದ ರಾಶಿ ಬಿದ್ದಿದ್ದು, ಸ್ವಚ್ಛತೆ ನಿರ್ವಹಣೆಗೂ ಸೂಕ್ತ ಗಮನ ನೀಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಪಂಚಾಯತ್ ಈಗಾಗಲೇ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದ್ದು, ಆಡಳಿತಾತ್ಮಕ ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
“ಒಟ್ಟಾರೆಯಾಗಿ ಅಂಬ್ಲಮೊಗರು ಗ್ರಾಮ ಪಂಚಾಯತ್ ಸಮಸ್ಯೆಗಳ ಆಗಾರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಪಂಚಾಯತ್‌ಗೆ ಪೂರ್ಣಕಾಲಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಅಂಬ್ಲಮೊಗರು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.