Site icon Ullalavani

ದಿವ್ಯಜ್ಯೋತಿ ಕ್ರಿಕೆಟರ್ಸ್‌ನ 20ನೇ ವರ್ಷದ ಕಲಾ ಕಾಣಿಕೆ

ಕುತ್ತಾರು: ಕುತ್ತಾರು ಪಂಡಿತ್ ಹೌಸ್ ದಿವ್ಯಜ್ಯೋತಿ ಕ್ರಿಕೆಟರ್ಸ್ ಹಾಗೂ ದಿವ್ಯಜ್ಯೋತಿ ಮಹಿಳಾ ವಿಭಾಗದ ವತಿಯಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿ ವಿನಾಯಕ ದೇವಸ್ಥಾನದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ದಿವ್ಯಜ್ಯೋತಿಯವರ 20ನೇ ವರ್ಷದ ಕಲಾ ಕಾಣಿಕೆಯ ದೃಶ್ಯ ರೂಪಕದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಪಂಡಿತ್ ಹೌಸ್ ದಿವ್ಯಜ್ಯೋತಿ ಕಟ್ಟೆಯ ಪರಿಸರದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ದಿವ್ಯಜ್ಯೋತಿ ಕ್ರಿಕೆಟರ್ಸ್ ಹಾಗೂ ಮಹಿಳಾ ವಿಭಾಗದ ಮುಂದಿನ ಕಾರ್ಯಚಟುವಟಿಕೆಗಳಿಗಾಗಿ ಕಟ್ಟೆಯ ಪರಿಸರದಲ್ಲಿ ಸ್ವಂತ ಜಾಗ ಖರೀದಿಸಿರುವ ಹಿನ್ನೆಲೆಯಲ್ಲಿ, ಜಾಗ ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಧನ ಸಂಗ್ರಹಿಸುವ ವಿಜ್ಞಾಪನಾ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಯಿತು. ಜೊತೆಗೆ ಪರಿಸರದ ಇಬ್ಬರು ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು.

ಶ್ರೀ ಕ್ಷೇತ್ರ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಶ್ರೀ ಸ್ವಾಮಿ ರಮಾನಂದಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರು ಆಮಂತ್ರಣ ಪತ್ರಿಕೆ ಹಾಗೂ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದಿವ್ಯಜ್ಯೋತಿ ಕ್ರಿಕೆಟರ್ಸ್ ಹಾಗೂ ಮಹಿಳಾ ವಿಭಾಗವು ನಿರಂತರವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಂಘಟನೆಯ ಮುಂದಿನ ಚಟುವಟಿಕೆಗಳಿಗೆ ಸ್ವಂತ ಜಾಗದ ಅವಶ್ಯಕತೆ ಇತ್ತು. ಇದೀಗ ಜಾಗ ಖರೀದಿಸಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿವೇಕಾನಂದ ಸನಿಲ್, ಮಂಗಳೂರು ಮಂಡಲ ಭಾರತೀಯ ಜನತಾ ಪಕ್ಷ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರಣ್ ಶೆಟ್ಟಿ, ಕುತ್ತಾರು ಶ್ರೀ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡಿಗೆ ಕಾರ್ಯಕ್ರಮದ ಅಧ್ಯಕ್ಷ ಪ್ರವೀಣ್ ಕುತ್ತಾರು ಅತಿಥಿಗಳಾಗಿ ಭಾಗವಹಿಸಿ, ದಿವ್ಯಜ್ಯೋತಿ ಕ್ರಿಕೆಟರ್ಸ್‌ನ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಮುಂದಿನ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ದಿವ್ಯಜ್ಯೋತಿ ಕ್ರಿಕೆಟರ್ಸ್ ಅಧ್ಯಕ್ಷ ಯತೀಶ್ ಶೆಟ್ಟಿ ಮಾತನಾಡಿ, ಸಂಘಟನೆಯ ಜಾಗ ಖರೀದಿ ಹಾಗೂ ಕಟ್ಟಡ ನಿರ್ಮಾಣದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿವಿಧ ಖರ್ಚು-ವೆಚ್ಚಗಳ ನಡುವೆಯೂ ದಿವ್ಯಜ್ಯೋತಿ ಕ್ರಿಕೆಟರ್ಸ್‌ನ ಸೇವಾ ಕಾರ್ಯಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದ ಅವರು, ಇದೇ ಸಂದರ್ಭದಲ್ಲಿ ಮೂವರು ಅಶಕ್ತರಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ದಿವ್ಯಜ್ಯೋತಿ ಕ್ರಿಕೆಟರ್ಸ್‌ನ ಸದಸ್ಯ ಬಂಧುಗಳ ಮನೆಯಲ್ಲಿ ಹೆಣ್ಣುಮಕ್ಕಳ ವಿವಾಹ ನಡೆಯುವ ಸಂದರ್ಭದಲ್ಲಿ ತಲಾ 10 ಸಾವಿರ ರೂ. ಸಹಾಯಧನ ನೀಡಲಾಗುವುದು. ಸದಸ್ಯರ ಕುಟುಂಬದಲ್ಲಿ ಯಾವುದೇ ಆಪತ್ತು ಸಂಭವಿಸಿದರೂ ಸಂಘಟನೆ ತಕ್ಷಣ ಸ್ಪಂದಿಸಿ ನೆರವು ನೀಡಲಿದೆ ಎಂದು ಯತೀಶ್ ಶೆಟ್ಟಿ ಹೇಳಿದರು.

ದಿವ್ಯಜ್ಯೋತಿ ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಪೂಜಾರಿ, ಗೌರವಾಧ್ಯಕ್ಷ ಅಶೋಕ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರಮಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವ್ಯಜ್ಯೋತಿ ಕ್ರಿಕೆಟರ್ಸ್ ಸದಸ್ಯ ನಿಶಾನ್ ಸ್ವಾಗತಿಸಿದರು.

Exit mobile version