Site icon Ullalavani

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ 5ನೇ ವರ್ಷದ ‘ಆಟಿಡೊಂಜಿ ಕೂಡಾಟಿಕೆ’ಗೆ ಚಾಲನೆ

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ 5ನೇ ವರ್ಷದ ‘ಆಟಿಡೊಂಜಿ ಕೂಡಾಟಿಕೆ’ ಕಾರ್ಯಕ್ರಮಕ್ಕೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ತುಳುನಾಡಿನ ಆಟಿ ತಿಂಗಳ ಸಾಂಪ್ರದಾಯಿಕ ‘ಆಟಿಕಳೆಂಜ’ ನರ್ತನವನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಕೆ. ಅಸೈಗೋಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರಿಗೆ ತಕ್ಕಂತೆ ಪ್ರತಿಷ್ಠಾನವು ಸಮಾಜಮುಖಿ ಹಾಗೂ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಸಧೃಢ ನಾಯಕತ್ವದೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸದಸ್ಯರ ತಂಡವಿದ್ದರೆ ಸಂಸ್ಥೆ ಶಕ್ತಿಶಾಲಿಯಾಗಿ ಬೆಳೆಯುತ್ತದೆ ಎಂಬುದಕ್ಕೆ ಭಗತ್ ಸಿಂಗ್ ಸೇವಾ ಪ್ರತಿಷ್ಠಾನವೇ ನಿದರ್ಶನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿಕೊಂಡು ಮುನ್ನಡೆಯುವುದು ಅಗತ್ಯ. ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ‘ಕುಂಬಾರನಿಗೆ ವರುಷ, ದೊನ್ನೆಗೆ ನಿಮಿಷ’ ಎಂಬಂತೆ ಸಂಸ್ಥೆಯ ಬೆಳವಣಿಗೆಗೆ ಎಲ್ಲರೂ ಬದ್ಧತೆಯಿಂದ ದುಡಿಯಬೇಕು. ಸಂಸ್ಥೆಯ ಉದ್ದೇಶ ಉತ್ತಮವಾಗಿರುವುದು ಅತ್ಯಗತ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಕೊಂಡಾಣ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಟ್ರಸ್ಟಿ ಚಿದಾನಂದ ಪೂಜಾರಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಹಾಗೂ ಕೋಶಾಧಿಕಾರಿ ಪ್ರಸಾದ್ ಕೊಂಡಾಣ ಉಪಸ್ಥಿತರಿದ್ದರು.

ಕಾರ್ಯದರ್ಶಿ ದೀಕ್ಷಿತ್ ನಿಸರ್ಗ ಸ್ವಾಗತಿಸಿದರು. ‘ಆಟಿಡೊಂಜಿ ಕೂಡಾಟಿಕೆ’ ಸಂಚಾಲಕ ದಾಮೋದರ ನಡಾರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು ಕಾರ್ಯಕ್ರಮ ನಿರೂಪಿಸಿದರು. ದಿವಿತ್ ಜೆ. ಪೂಜಾರಿ ಪ್ರಾರ್ಥನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಹರೀಶ್ ಮುಂಡೋಳಿ, ತುಳು ರಂಗಭೂಮಿ ಕಲಾವಿದ ದಿನೇಶ್ ಅತ್ತಾವರ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಪ್ರಮುಖರಾದ ಲಕ್ಷ್ಮಣ ಪೂಜಾರಿ, ರಾಜೇಶ್ ಕೆರೆಬೈಲು, ಸಿಂಫೋನಿ ನೃತ್ಯ ಸಂಯೋಜಕ ಪ್ರಕಾಶ್ ಸಿಂಫೋನಿ, ರಚೆಲ್ ಪ್ರಕಾಶ್ ಸೇರಿದಂತೆ ಪ್ರತಿಷ್ಠಾನದ ಪ್ರಮುಖರು, ನೂತನ ಸದಸ್ಯರು, ಯುವ ಸದಸ್ಯರು ಹಾಗೂ ಸದಸ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು ಹಾಗೂ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ನೃತ್ಯ, ಗಾಯನ, ಹಾಸ್ಯ ಪ್ರಹಸನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಮಡ್ಯಾರ್ ಶಾಸ್ತರ ಬಳಗದ ಮಕ್ಕಳ ನೃತ್ಯವೂ ನಡೆಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸದಸ್ಯರ ಮನೆಗಳಲ್ಲಿ ತಯಾರಿಸಲಾದ ಸುಮಾರು 38 ಬಗೆಯ ಆಟಿ ತಿಂಗಳ ವಿಶೇಷ ತಿನಿಸುಗಳು ಹಾಗೂ ಸಾಂಪ್ರದಾಯಿಕ ಪದಾರ್ಥಗಳ ಭೋಜನವನ್ನು ಆಯೋಜಿಸಲಾಗಿತ್ತು. ನೆರೆದಿದ್ದವರು ವಿವಿಧ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.

Exit mobile version