ತಲಪಾಡಿ: ಇತ್ತೀಚೆಗೆ ನಡೆದ ನೀಟ್ ಹಾಗೂ ಜೆಇಇ ಪರೀಕ್ಷೆಗಳಲ್ಲಿ ತಲಪಾಡಿ ಗ್ರಾಮದ ವಿದ್ಯಾರ್ಥಿನಿ ಹಾದಿಯ ಮರಿಯಮ್ ಸಂಶೀರ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
ತಲಪಾಡಿ ಗ್ರಾಮದ ಮೊಹಮ್ಮದ್ ಸಂಶೀರ್ ತಲಪಾಡಿ ಹಾಗೂ ಫಾತಿಮತ್ ಸಾಬಿಹ ಎಸ್. ದಂಪತಿಯ ಪುತ್ರಿಯಾಗಿರುವ ಹಾದಿಯ ಮರಿಯಮ್ ಸಂಶೀರ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97 ಅಂಕಗಳನ್ನು ಗಳಿಸಿದ್ದರು. ಬಳಿಕ ನಡೆದ ನೀಟ್ ಪರೀಕ್ಷೆಯಲ್ಲಿ 7,262ನೇ ರ್ಯಾಂಕ್ ಹಾಗೂ ಜೆಇಇ ಮೇನ್ ಇಂಜಿನಿಯರಿಂಗ್ ವಿಭಾಗದಲ್ಲಿ 8,074ನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ.
ಈ ಗಮನಾರ್ಹ ಸಾಧನೆಗಾಗಿ ಇತ್ತೀಚೆಗೆ ಮಲಪ್ಪುರಂನಲ್ಲಿ ನಡೆದ ಮೆಡಿಕಲ್ ವಿಕ್ಟರಿ ಡೇ ಕಾರ್ಯಕ್ರಮದಲ್ಲಿ ಮಲಪ್ಪುರಂ ಜಿಲ್ಲಾಧಿಕಾರಿ ದಿಲೀಪ್ ಕೈನಿಕ್ಕರ ಅವರು ಹಾದಿಯ ಮರಿಯಮ್ ಸಂಶೀರ್ ಅವರನ್ನು ಸನ್ಮಾನಿಸಿದರು.
ಹಾದಿಯ ಮರಿಯಮ್ ಸಂಶೀರ್ ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ತಲಪಾಡಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.