Site icon Ullalavani

ಉಡುಪಿಯಲ್ಲಿ ಮತ್ತೊಂದು ಶೂಟೌಟ್‌; ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

ಉಡುಪಿ, ಆಗಸ್ಟ್​​ 07: ಇತ್ತೀಚೆಗೆ ಕರಾವಳಿಯ ಕಡಲತಡಿಯಲ್ಲಿ ನಡೆದ ಶೂಟೌಟ್​​ನಲ್ಲಿ  ಓರ್ವ ಉದ್ಯಮಿ ಕೊಲೆಯಾಗಿದ್ದರು. ಇದೀಗ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಶೂಟೌಟ್‌ ಘಟನೆ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಉದ್ಯಮಿ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಡೇವಿಡ್‌ ಡಿಸೋಜಾರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ (death) ಮಾಡಿದ್ದಾರೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಸಂಭವಿಸಿದೆ.

ಗುಂಡಿಕ್ಕಿ ಕಾಂಗ್ರೆಸ್ ಮುಖಂಡನ ಹತ್ಯೆ

ಕೊಲೆಯಾದ ಡೇವಿಡ್‌ ಡಿಸೋಜಾ ಮುದರಂಗಡಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶೂಟೌಟ್‌ಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ

ಇನ್ನು ವೈಯಕ್ತಿಕ ದ್ವೇಷ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೈದು ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

ಹಣಕಾಸಿನ ವೈಷಮ್ಯಕ್ಕೆ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ ಗುಂಡಿಕ್ಕಿ ಹತ್ಯೆ

ಇನ್ನು ಇತ್ತೀಚೆಗೆ ಉಡುಪಿ ಜಿಲ್ಲೆಯ ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಅವರನ್ನು ಡೆರಿಕ್ ಎಂಬಾತ ನಾಡಪಿಸ್ತೂಲಿನಿಂದ ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಿದ್ದ. 27 ಲಕ್ಷ ರೂ ಹಣ ವಸೂಲಿ ಮಾಡಿಕೊಟ್ಟಿದ್ದ ಐವನ್‌ಗೆ ನೀಡಬೇಕಿದ್ದ ಕೇವಲ 1.5 ಲಕ್ಷ ರೂ ಬಾಕಿ ಹಣದ ವಿಚಾರವಾಗಿ ಇಬ್ಬರ ನಡುವೆ ಉಂಟಾದ ತೀವ್ರ ವಾಗ್ವಾದ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿತ್ತು.

ಮೃತ ಐವನ್ ರೌಡಿಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದ. ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಡೆರಿಕ್ ಪತ್ತೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Exit mobile version