Site icon Ullalavani

ಯುವತಿಯರೇ, ಬದುಕು ಅಂದರೆ ಸೋಲಿಗೆ ಶರಣಾಗುವುದು ಅಲ್ಲ

ಯುವತಿಯರೇ, ಬದುಕು ಅಂದರೆ ಮುಖಕ್ಕೆ ಹಚ್ಚುವ ಅಲಂಕಾರ, ತಳುಕು-ಬಳುಕು ಅಥವಾ ವೈಯ್ಯಾರ ಮಾತುಗಳಲ್ಲ. ನಿಮ್ಮ ಬದುಕು ನಿಮ್ಮ ತಂದೆ-ತಾಯಿಯರ ಕನಸು, ನಿಮ್ಮ ಸ್ವಾಭಿಮಾನ ಮತ್ತು ನಿಮ್ಮ ಭವಿಷ್ಯ. ನಿಮ್ಮ ಜೀವನದ ಮೌಲ್ಯವನ್ನು ಯಾವುದೇ ಕ್ಷಣಿಕ ನೋವು ಅಥವಾ ವೈಫಲ್ಯದಿಂದ ಅಳೆಯಬೇಡಿ.

ಪ್ರೀತಿ ಮತ್ತು ಪ್ರೇಮ ಮಾನವ ಜೀವನದ ಸಹಜ ಭಾವನೆಗಳು. ಆದರೆ ಅವುಗಳಲ್ಲೇ ಜೀವನ ಮುಗಿಯುವುದಿಲ್ಲ. ಭಾವನೆಗಳನ್ನು ಮೀರಿ ಧೈರ್ಯದಿಂದ ನಿಲ್ಲುವುದು, ಸಂಕಷ್ಟಗಳನ್ನು ಎದುರಿಸಿ ಮುಂದೆ ಸಾಗುವುದು ಮತ್ತು ಜೀವನವನ್ನು ಕಟ್ಟಿಕೊಳ್ಳುವುದೇ ನಿಜವಾದ ಗೆಲುವು.

ಪ್ರತಿಯೊಬ್ಬ ಯುವತಿಯೂ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಆತ್ಮವಿಶ್ವಾಸ, ಧೈರ್ಯ, ಶ್ರದ್ಧೆ ಮತ್ತು ಮಾನಸಿಕ ಸ್ಥೈರ್ಯವೇ ಜೀವನದ ದೊಡ್ಡ ಸಂಪತ್ತು. ದೇವರಲ್ಲಿ ನಂಬಿಕೆ ಇರುವುದು ಒಳ್ಳೆಯದು; ಆದರೆ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ನಿಮ್ಮೊಳಗೇ ಇದೆ. ಅನೇಕ ಸಂದರ್ಭಗಳಲ್ಲಿ ನೀವೇ ನಿಮ್ಮ ಜೀವನದ ದೇವರಾಗಬೇಕು.

ಹೆಣ್ಣನ್ನು ಪ್ರಕೃತಿಗೆ ಮತ್ತು ಭೂಮಿಗೆ ಹೋಲಿಸಿರುವುದು ಆಕೆಯ ಸೃಜನಶೀಲತೆ, ಸಹನೆ ಮತ್ತು ಜೀವದಾಯಕ ಶಕ್ತಿಯ ಕಾರಣದಿಂದ. ಸಮಾಜವು ಮಹಿಳೆಗೆ ದೇವರಿಗಿಂತಲೂ ಶ್ರೇಷ್ಠ ಸ್ಥಾನ ನೀಡಿರುವುದು ಆಕೆಯ ಬದುಕಿನ ಮಹತ್ವವನ್ನು ಸಾರುತ್ತದೆ. ಆದ್ದರಿಂದ ನಿಮ್ಮ ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸಿ, ಸಾಮಾಜಿಕ ಒತ್ತಡಗಳು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಿ.

ಇತ್ತೀಚೆಗೆ ಉಡುಪಿಯ ಮಲ್ಪೆಯ ಕಲ್ಮಾಡಿಯ 27 ವರ್ಷದ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಯುವತಿ ಕೃತಿ ಬಂಗೇರ ಅವರ ದುಃಖದ ಸಾವಿನ ಸುದ್ದಿ ಅನೇಕರನ್ನು ನೋವಿಗೆ ದೂಡಿದೆ. ಅವರ ಕುಟುಂಬ ಹಾಗೂ ಆಪ್ತರಿಗೆ ಇದು ತುಂಬಲಾರದ ನಷ್ಟ. ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ, ಪರಸ್ಪರ ಬೆಂಬಲ ಮತ್ತು ಸಮಯೋಚಿತ ಸಹಾಯದ ಅಗತ್ಯವನ್ನು ನೆನಪಿಸುತ್ತವೆ.

ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಸಹಾಯ ಕೇಳುವುದು ದುರ್ಬಲತೆ ಅಲ್ಲ, ಧೈರ್ಯದ ಲಕ್ಷಣ. ಕುಟುಂಬದವರು, ಸ್ನೇಹಿತರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡಿ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ, ಬದುಕಿಗೆ ಯಾವಾಗಲೂ ಹೊಸ ಅವಕಾಶವಿದೆ.

Exit mobile version