Site icon Ullalavani

ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು?

ನವದೆಹಲಿ, ಆಗಸ್ಟ್ 6: ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಗಣನೀಯವಾಗಿ ವಿಸ್ತರಣೆಯಾಗಿದೆ.

ಆದರೆ, ಇದೇ ಅವಧಿಯಲ್ಲಿ ಅಡಿಕೆ ಉತ್ಪಾದಕತೆ (Arecanut Productivity) ತೀವ್ರವಾಗಿ ಕುಸಿದಿರುವುದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ (Lok Sabha) ಮಂಡಿಸಿರುವ ಅಂಕಿಅಂಶಗಳಿಂದ ಬಹಿರಂಗವಾಗಿದೆ. 2021-22ರಲ್ಲಿ ರಾಜ್ಯದಲ್ಲಿ 6,03,121 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. 2025-26ರ ಎರಡನೇ ಮುಂಗಡ ಅಂದಾಜಿನ ಪ್ರಕಾರ ಈ ಪ್ರದೇಶ 7,98,677 ಹೆಕ್ಟೇರ್‌ಗೆ ಏರಿಕೆಯಾಗಿದೆ. ಅಂದರೆ ಸುಮಾರು 1,95,500 ಹೆಕ್ಟೇರ್‌ ಅಥವಾ ಶೇ 32ಕ್ಕೂ ಹೆಚ್ಚು ವಿಸ್ತರಣೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ ಉತ್ಪಾದಕತೆ 2.24 ಟನ್‌ನಿಂದ 1.42 ಟನ್‌ಗೆ ಇಳಿಕೆಯಾಗಿದೆ. ಇದು ಸುಮಾರು ಶೇ 37ರಷ್ಟು ಕುಸಿತವಾಗಿದೆ.

5 ವರ್ಷಗಳ ಹಿಂದಿಗಿಂತ ಶೇ 16 ರಷ್ಟು ಕುಸಿದ ಅಡಿಕೆ ಉತ್ಪಾದನೆ

ಉತ್ಪಾದಕತೆ ಕುಸಿದ ಪರಿಣಾಮ ಅಡಿಕೆ ಉತ್ಪಾದನೆಯಲ್ಲೂ ಇಳಿಕೆ ಕಂಡುಬಂದಿದೆ. 2021-22ರಲ್ಲಿ ಕರ್ನಾಟಕದಲ್ಲಿ 13.5 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಮುಂದಿನ ವರ್ಷ ಉತ್ಪಾದನೆ 10.2 ಲಕ್ಷ ಟನ್‌ಗೆ ಕುಸಿದಿತ್ತು. ಬಳಿಕ ನಿಧಾನವಾಗಿ ಚೇತರಿಸಿಕೊಂಡು 2025-26ರ ಅಂದಾಜಿನಲ್ಲಿ 11.3 ಲಕ್ಷ ಟನ್ ತಲುಪಿದೆ. ಆದರೂ ಐದು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಉತ್ಪಾದನೆ ಸುಮಾರು ಶೇ 16ರಷ್ಟು ಕಡಿಮೆ ಇದೆ. ಈ ಅಂಕಿಅಂಶಗಳನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.

ದೇಶದ ಅಡಿಕೆ ಕ್ಷೇತ್ರದಲ್ಲಿ ಕರ್ನಾಟಕದ್ದೇ ಪ್ರಾಬಲ್ಯ

ಉತ್ಪಾದಕತೆ ಕುಸಿದಿದ್ದರೂ, ದೇಶದ ಅಡಿಕೆ ಆರ್ಥಿಕತೆಯಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಅಡಿಕೆ ಬೆಳೆ ಪ್ರದೇಶದಲ್ಲಿ ಕರ್ನಾಟಕದ ಪಾಲು ಶೇ 71.56ರಷ್ಟಿದೆ. ರಾಷ್ಟ್ರೀಯ ಅಡಿಕೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 75.47ರಷ್ಟಿದೆ.

ಶಿವಮೊಗ್ಗದಲ್ಲೂ ಅಡಿಕೆ ಉತ್ಪಾದಕತೆ ಭಾರೀ ಇಳಿಕೆ

ರಾಜ್ಯದ ಪ್ರಮುಖ ಅಡಿಕೆ ಉತ್ಪಾದನಾ ಜಿಲ್ಲೆ ಶಿವಮೊಗ್ಗದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. 2021-22ರಲ್ಲಿ 1,11,758 ಹೆಕ್ಟೇರ್ ಇದ್ದ ಅಡಿಕೆ ಪ್ರದೇಶ 2025-26ರಲ್ಲಿ 1,34,692 ಹೆಕ್ಟೇರ್‌ಗೆ ಏರಿಕೆಯಾಗಿದೆ. ಆದರೆ, ಉತ್ಪಾದಕತೆ ಹೆಕ್ಟೇರ್‌ಗೆ 2.13 ಟನ್‌ನಿಂದ 1.11 ಟನ್‌ಗೆ ಕುಸಿದಿದೆ. ಪರಿಣಾಮ, ಉತ್ಪಾದನೆಯೂ 2,37,710 ಟನ್‌ನಿಂದ 1,49,593 ಟನ್‌ಗೆ ಇಳಿಕೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಅಡಿಕೆ ಉತ್ಪಾದನೆ ಇಳಿಕೆ

ದಕ್ಷಿಣ ಕನ್ನಡದಲ್ಲೂ ಅಡಿಕೆ ಬೆಳೆಯುವ ಪ್ರದೇಶ 1,01,689 ಹೆಕ್ಟೇರ್‌ನಿಂದ 1,07,900 ಹೆಕ್ಟೇರ್‌ಗೆ ಹೆಚ್ಚಾಗಿದೆ. ಆದರೆ ಉತ್ಪಾದಕತೆ 2.70 ಟನ್‌ನಿಂದ 1.31 ಟನ್‌ಗೆ ಕುಸಿದಿದೆ. ಇದರ ಪರಿಣಾಮ ಉತ್ಪಾದನೆ 2,74,560 ಟನ್‌ನಿಂದ 1,41,349 ಟನ್‌ಗೆ ಇಳಿಕೆಯಾಗಿದೆ. ಉಡುಪಿಯಲ್ಲಿ ಉತ್ಪಾದಕತೆ 3.12 ಟನ್‌ನಿಂದ 1.50 ಟನ್‌ಗೆ ಇಳಿದಿದ್ದು, ಉತ್ಪಾದನೆಯೂ 72,430 ಟನ್‌ನಿಂದ 39,859 ಟನ್‌ಗೆ ಕುಸಿದಿದೆ. ಇದೇ ವೇಳೆ ಬೆಳೆಯುವ ಪ್ರದೇಶದಲ್ಲಿ ಸ್ವಲ್ಪ ಏರಿಕೆಯಾಗಿದೆ.

ಉತ್ತರ ಕನ್ನಡದಲ್ಲಿ ಅಡಿಕೆ ಪ್ರದೇಶ 32,698 ಹೆಕ್ಟೇರ್‌ನಿಂದ 39,354 ಹೆಕ್ಟೇರ್‌ಗೆ ಹೆಚ್ಚಾದರೂ, ಉತ್ಪಾದಕತೆ 2.90 ಟನ್‌ನಿಂದ 1.50 ಟನ್‌ಗೆ ಇಳಿಕೆಯಾಗಿದೆ. ಇದರಿಂದ ಉತ್ಪಾದನೆ 94,823 ಟನ್‌ನಿಂದ 59,031 ಟನ್‌ಗೆ ಕುಸಿದಿದೆ.

ಆದರೆ ಎಲ್ಲ ಜಿಲ್ಲೆಗಳಲ್ಲೂ ಇದೇ ಪ್ರವೃತ್ತಿ ಕಂಡುಬಂದಿಲ್ಲ. ಚಿಕ್ಕಮಗಳೂರಿನಲ್ಲಿ ಇತ್ತೀಚಿನ ಅಂದಾಜಿನ ಪ್ರಕಾರ ಉತ್ಪಾದನೆ ಹೆಚ್ಚಾಗಿದೆ. ಹಾವೇರಿ ಮತ್ತು ಹಾಸನ ಜಿಲ್ಲೆಗಳಲ್ಲೂ ಅಡಿಕೆ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಏರಿಕೆ ದಾಖಲಾಗಿದೆ.

ಅಡಿಕೆ ಉತ್ಪಾದನೆ ಕುಸಿತಕ್ಕೆ ಕಾರಣವೇನು?

ಉತ್ಪಾದಕತೆ ಕುಸಿತಕ್ಕೆ ನಿಖರ ಕಾರಣಗಳನ್ನು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ ವಿವರಿಸಲಾಗಿಲ್ಲ. ಆದರೆ, ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯ (DASD) ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಎಲೆ ಚುಕ್ಕೆ ರೋಗ, ಹಣ್ಣುಕೊಳೆ ರೋಗ ಮತ್ತು ಬೇರುಹುಳು ಬಾಧೆ ನಿರ್ವಹಣೆ, ಹೈಬ್ರಿಡ್ ಕುಬ್ಜ ತಳಿಗಳ ಪ್ರೋತ್ಸಾಹ, ಬಹುಬೆಳೆ ಪದ್ಧತಿ ಹಾಗೂ ಹವಾಮಾನ ಆಧಾರಿತ ರೋಗ ಮುನ್ಸೂಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ಬಾಧಿತ 10 ತಾಲೂಕುಗಳಲ್ಲಿ ಸಮುದಾಯ ಆಧಾರಿತ ಎಲೆ ಚುಕ್ಕೆ ರೋಗ ನಿರ್ವಹಣಾ ಕಾರ್ಯಕ್ರಮವನ್ನೂ ಕೇಂದ್ರ ಸರ್ಕಾರ ಆರಂಭಿಸಿದೆ.

ದೇಶದಲ್ಲೂ ಇದೇ ಪರಿಸ್ಥಿತಿ

ಕರ್ನಾಟಕ ಮಾತ್ರವಲ್ಲ, ದೇಶದ ಅಡಿಕೆ ಕ್ಷೇತ್ರದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶ 2021-22ರಲ್ಲಿ 8,49,330 ಹೆಕ್ಟೇರ್‌ನಿಂದ 2025-26ರಲ್ಲಿ 11.06 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಸರಾಸರಿ ಉತ್ಪಾದಕತೆ 1.96 ಟನ್‌ನಿಂದ 1.38 ಟನ್‌ಗೆ ಕುಸಿದಿದೆ.

Exit mobile version