ಮಂಗಳೂರು, ಆ.5: ಮಂಗಳೂರಿನ ಇಎಸ್‌ಐ ಆಸ್ಪತ್ರೆ ಹಾಗೂ ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಔಷಧ ವಿತರಣೆಯಲ್ಲಿ ಅವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿ ಕೋಟೆಕಾರು ನಿವಾಸಿ ಧನುಷ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ತಮ್ಮ ತಾಯಿಗೆ ಹೃದಯ ಸಂಬಂಧಿತ ಕಾಯಿಲೆ ಇರುವ ಕಾರಣ ಕಳೆದ ಒಂದು ವರ್ಷದಿಂದ ಇಎಸ್‌ಐ ಯೋಜನೆಯಡಿ ಮಂಗಳೂರಿನ ಇಎಸ್‌ಐ ಆಸ್ಪತ್ರೆಯಿಂದ ಔಷಧ ಪಡೆಯುತ್ತಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಅಗತ್ಯ ಔಷಧಗಳು ಲಭ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವು ಮಣಿಪಾಲದಲ್ಲಿ ಉದ್ಯೋಗದಲ್ಲಿದ್ದು, ವೈದ್ಯರ ಸಲಹೆಯಂತೆ ಪ್ರತಿ ಒಂದರಿಂದ ಎರಡು ತಿಂಗಳಿಗೊಮ್ಮೆ ರಜೆ ಪಡೆದು ಔಷಧ ಪಡೆಯಲು ಬರುತ್ತಿರುವುದಾಗಿ ಹೇಳಿದ್ದಾರೆ. ಮೊದಲಿಗೆ ಬಿಜೈ ಇಎಸ್‌ಐ ಡಿಸ್ಪೆನ್ಸರಿಗೆ ತೆರಳಿದಾಗ ಗಂಟೆಗಳ ಕಾಲ ಸಾಲಿನಲ್ಲಿ ನಿಂತ ಬಳಿಕ ಔಷಧದ ಸ್ಟಾಕ್ ಇಲ್ಲ ಎಂದು ತಿಳಿಸಿ ಕದ್ರಿಯ ಇಎಸ್‌ಐ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಕದ್ರಿಯ ಇಎಸ್‌ಐ ಆಸ್ಪತ್ರೆಗೆ ತೆರಳಿದ ನಂತರವೂ ಮತ್ತೆ ದೀರ್ಘ ಸಾಲಿನಲ್ಲಿ ನಿಲ್ಲಬೇಕಾಗುತ್ತಿದ್ದು, ವೈದ್ಯರ ಸಹಿ ಹಾಗೂ ಮುದ್ರೆ ಪಡೆಯಲು ಹಲವು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಬಳಿಕ ಔಷಧಾಲಯಕ್ಕೆ ಹೋದರೂ ಔಷಧದ ಸ್ಟಾಕ್ ಇಲ್ಲ ಎಂಬ ಉತ್ತರವೇ ಸಿಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯಿಂದ ಒಂದು ದಿನದ ಸಮಯ ವ್ಯರ್ಥವಾಗುತ್ತಿದ್ದು, ಕೊನೆಗೆ ಅನಿವಾರ್ಯವಾಗಿ ಖಾಸಗಿ ಮೆಡಿಕಲ್ ಅಂಗಡಿಗಳಿಂದ ಹಣ ನೀಡಿ ಔಷಧ ಖರೀದಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಕಳೆದ ಮೂರು ಬಾರಿ ಇದೇ ರೀತಿಯ ಅನುಭವವಾಗಿದ್ದು, ಮೊದಲೇ ಔಷಧ ಲಭ್ಯವಿಲ್ಲ ಎಂಬ ಮಾಹಿತಿ ನೀಡಿದರೆ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿಯಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದ್ದು, ಇಂತಹ ಅವ್ಯವಸ್ಥೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಧನುಷ್, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.