ಕೊಣಾಜೆ: ಸಮಾಜದಲ್ಲಿ ಅಸ್ಪ್ರಶ್ಯತೆ, ಜಾತಿಯತೆ, ಅಸಮಾನತೆ ತುಂಬಿದ್ದ ಬೇರೆ ಬೇರೆ ಕಾಲಘಟ್ಟದಲ್ಲಿ ಸಮಾನತೆಯ ಆಶಯದೊಂದಿಗೆ ಹೋರಾಡಿದವರು ಬಸವಣ್ಣ ಮತ್ತು ನಾರಾಯಣ ಗುರುಗಳು. ಅವರು ಆಧ್ಯಾತ್ಮ, ಸಾಮಾಜಿಕ ಸಾಧನೆಯ ಮೂಲಕ ಇಡೀ ಸಮಾಜವನ್ನು ಪರಿವರ್ತನೆ ಮಾಡಿದ ಯುಗ ಪ್ರವರ್ತಕರಾಗಿದ್ದಾರೆ ಎಂದು ಚಿಂತಕಿ, ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ), ಗ್ರಾಮ ಚಾವಡಿ ಇವರ ಸಹಯೋಗದಲ್ಲಿ ನಡೆದ “ವಿಚಾರ ಸಂಕಿರಣ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಾರಾಯಾಣ ಗುರು ಹಾಗೂ ಬಸವಣ್ಣ ಅವರಿಬ್ಬರ ಆಧ್ಯಾತ್ಮಿಕ, ಸಾಹಿತ್ಯಿಕ ಹಾಗೂ ಸಮಾಜಮುಖಿ ಚಿಂತನೆಗಳು ಇಂದಿನ ಕಾಲಕ್ಕೂ ಮಾದರಿಯಾಗಿದೆ ಎಂದರು.
ಸಮಾರಂಭದಲ್ಲಿ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇದರ ಅಧ್ಯಕ್ಷರಾದ ವಿಜೇತ್ ಪಜೀರು ಮಾತನಾಡಿ, ಮಂಗಳೂರು ವಿವಿಯ ನಾರಾಯಣ ಗುರು ಅಧ್ಯಯನ ಕೇಂದ್ರ ಹಾಗೂ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘವು ಗುರುಗಳ ಆಶಯದಂತೆ ಅನೇಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
. ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಜಯರಾಜ್ ಎನ್ ಇವರು ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಾಯ ಪೂಜಾರಿ ಪಜೀರು ಭಂಡಾರಮನೆ, ನಾಗಮ್ಮ ಪೂಜಾರ್ತಿ ಇನೊಳಿ ಪಾವೂರು, ರಮೇಶ್ ಕರ್ಕೇರ ಮರ್ಕಮೆ ಬೋಳಿಯಾರು, ಲಕ್ಷ್ಮಣ ಪೂಜಾರಿ ಬೋಲ್ಲೆಕುಮೇರು, ಮೀನಾಕ್ಷಿ ಗೋಳಿದಪಡ್ಪು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಆಶ್ರಯಹೀನರಿಗೆ ಮನೆ ನಿರ್ಮಾಣಕ್ಕಾಗಿ ಧನ ಸಹಾಯವನ್ನು ಮಾಡಲಾಯಿತು.
ನಾರಾಯಣ ಗುರು ಸೇವಾ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಬಂಗೇರ, ಕೊಣಾಜೆ ಸ್ವಾಗತಿಸಿದರು. ವೇಣುಗೋಪಾಲ್ ವಂದಿಸಿದರು. ಸುಜಾತ ಹರೇಕಳ ಇವರು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಗುರು ಅಧ್ಯಯನ ಪೀಠದ ಡಾ.ರವಿರಾಜ್ ಅತಿಥಿಗಳನ್ನು ಪರಿಚಯಿಸಿದರು.