Site icon Ullalavani

ಬಾಳೆಪುಣಿ: ಅನಧಿಕೃತವಾಗಿ ನಿರ್ಮಾಣಗೊಡ ಗುಡಿಸಲುಗಳ ತೆರವು


ಕೊಣಾಜೆ: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೂಹಾಕುವಕಲ್ಲಿನಲ್ಲಿರುವ ನವಗ್ರಾಮ ಸೈಟ್ ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಗುಡಿಸಲುಗಳನ್ನು ಪೊಲೀಸ್ ಭದ್ರತೆಯೊಂದಿಗೆ ಪಂಚಾಯತ್ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದರು.


ಬಾಳೆಪುಣಿ ಪಂಚಾಯತ್ ನ ಹೂಹಾಕುವಕಲ್ಲು ಸಮೀಪದ ನವಗ್ರಾಮ ಸೈಟ್ ನಲ್ಲಿ ಹಲವಾರು ಮನೆಗಳಿದ್ದು , ಕೆಲವು ತಿಂಗಳ ಹಿಂದೆ ಕೆಲವರು ನವಗ್ರಾಮ ಸೈಟ್ ನ ಪಂಚಾಯತ್ ಜಮೀನಿನಲ್ಲಿ ಕೆಲವರು ಅನಧಿಕೃವಾಗಿ ಗುಡಿಸಲುಗಳನ್ನು ನಿರ್ಮಾಣ ಮಾಡುತಿದ್ದಾರೆ ಎಂಬ ಆರೋಪ‌ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪಂಚಾಯತ್ ಅಧಿಕಾರಿಗಳು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ನಿರ್ಮಾಣ ಮಾಡದಂತೆ ತಿಳಿಸಿದ್ದರು ಕೂಡಾ ಐದಾರು ಗುಡಿಸಲುಗಳು ಈ ಸ್ಥಳದಲ್ಲಿ ನಿರ್ಮಾಣಗೊಂಡಿದ್ದವು ಎಂದು ತಿಳಿದು ಬಂದಿದೆ.
ಬಾಳೆಪುಣಿ ಗ್ರಾಮ ಪಂಚಾಯತ್ ಅಧಿಕಾರಿಗಳು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸೋಮವಾರದಂದು ಕೊಣಾಜೆ ಪೊಲೀಸರ ಭದ್ರತಾ ಸಹಕಾರದೊಂದಿಗೆ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪಿ, ಕಾರ್ಯದರ್ಶಿ ಆಯಿಶಾಬಾನು, ಸಿಬ್ಬಂದಿಗಳಾದ ಸದಾನಂದ, ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.

ಪಂಚಾಯತ್ ನ ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೆ ಗುಡಿಸಲು ಕಟ್ಟದಂತೆ ನಾವು ಮೊದಲೇ ಎಚ್ಚರಿಕೆ ಕೊಟ್ಟಿದ್ದೆವು. ಆದರೆ ಅವರು ಕೇಳದೇ ಇದ್ದಾಗ ಸಾಮಾನ್ಯ ಸಭೆಯಲ್ಲಿ ತೆಗೆದ ನಿರ್ಣಯದಂತೆ ಪೊಲೀಸರ ಸಹಾಯದೊಂದಿಗೆ ಸೋಮವಾರ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಮುಂದೆ ಸರ್ಕಾರದಿಂದ ನಿವೇಶನ ಒದಗಿಸಲು ಅವಕಾಶ ದೊರೆತರೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಆದ್ಯತೆ ನೀಡಲಾಗುತ್ತದೆ.

ವೆಂಕಟೇಶ ಪಿ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಳೆಪುಣಿ

Exit mobile version