Site icon Ullalavani

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ

ಉಳ್ಳಾಲ, ಆ. 3: ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಗೂ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ 30ಕ್ಕೂ ಹೆಚ್ಚು ವಾರಂಟ್‌ಗಳು ಜಾರಿಯಾಗಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ (33) ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ತಂಡ ಬಂಧಿಸಿದೆ.

ಬಂಧಿತನು ಉಮ್ಮರ್ ನವಾಫ್, ಅಬ್ದುಲ್ ಖಾದರ್ ಅವರ ಪುತ್ರ. ಮೂಲತಃ ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿಯಾಗಿದ್ದು, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಾವೂರು ಅಂಚೆ ವ್ಯಾಪ್ತಿಯ ಕುಂಡಪ್ಪು, ಗೇರುಕಟ್ಟೆಯ ನಾಜಿಯಾ ಮಂಜಿಲ್‌ನಲ್ಲಿ ವಾಸಿಸುತ್ತಿದ್ದನು.

ಪೊಲೀಸರ ಮಾಹಿತಿ ಪ್ರಕಾರ, ಉಮ್ಮರ್ ನವಾಫ್ ವಿರುದ್ಧ 13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವಿವಿಧ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆತನ ವಿರುದ್ಧ 30ಕ್ಕೂ ಹೆಚ್ಚು ಬಂಧನ ವಾರಂಟ್‌ಗಳನ್ನು ಹೊರಡಿಸಿತ್ತು.

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ಕರ್ತವ್ಯ ತಂಡವು ಆರೋಪಿ ಉಮ್ಮರ್ ನವಾಫ್‌ನನ್ನು ಆಗಸ್ಟ್ 2ರಂದು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 206/2012, 27/2017 ಹಾಗೂ 183/2017 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಆರೋಪಿಯ ವಿರುದ್ಧ ಪ್ರೋಕ್ಲಮೇಶನ್ (Proclamation) ಜಾರಿಯಾಗಿತ್ತು. ಅಲ್ಲದೆ, ಅಪರಾಧ ಸಂಖ್ಯೆ 276/2015 ಪ್ರಕರಣದಲ್ಲಿ ನ್ಯಾಯಾಲಯವು ಎಲ್‌.ಪಿ‌.ಸಿ. (Long Pending Case) ಎಂದು ದಾಖಲಿಸಿತ್ತು.

Exit mobile version